Kannada NewsKarnataka NewsLatestPolitics

*2-3 ದಿನಗಳಲ್ಲಿ ಸಂಪುಟಕ್ಕೆ ಮಹಿಳಾ ಸಚಿವರ ಸೇರ್ಪಡೆ: ಡಿ.ಕೆ. ಶಿವಕುಮಾರ್*

2-3 ದಿನಗಳಲ್ಲಿ ಸಂಪುಟಕ್ಕೆ ಮಹಿಳಾ ಸಚಿವರ ಸೇರ್ಪಡೆ: ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ,
ಬೆಂಗಳೂರು : “ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಕಾಂಗ್ರೆಸ್ ಸರ್ಕಾರದ ಬದ್ಧತೆ ಹಾಗೂ ಸಿದ್ಧಾಂತವಾಗಿದೆ. ಮುಂದಿನ ಎರಡು-ಮೂರು ದಿನಗಳಲ್ಲಿ ಸಂಪುಟಕ್ಕೆ ಮಹಿಳಾ ಸಚಿವರನ್ನು ಸೇರ್ಪಡೆ ಮಾಡಲಾಗುವುದು,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಇಂಡಿಯಾ ಟುಡೇ ರೌಂಡ್ ಟೇಬಲ್ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಆಡಳಿತ, ಪಕ್ಷ ಸಂಘಟನೆ, ಸಂಪುಟ ವಿಸ್ತರಣೆ, ಬೆಂಗಳೂರು ಅಭಿವೃದ್ಧಿ, ಕೇಂದ್ರ-ರಾಜ್ಯ ಸಂಬಂಧ, ನೀರಾವರಿ, ಯುವಜನತೆ ಸೇರಿದಂತೆ ಹಲವು ವಿಚಾರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
“ನಾನೀಗ ಆತುರದ ವ್ಯಕ್ತಿಯಾಗಿದ್ದೇನೆ. ರಾಜ್ಯದ ಜನರು ಹಾಗೂ ದೇಶದ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉತ್ತಮ ಆಡಳಿತ ನೀಡುತ್ತೇನೆ ಎಂಬ ವಿಶ್ವಾಸ ಅವರಲ್ಲಿದೆ. ಕರ್ನಾಟಕದ ಮೂಲಕವೇ ಭಾರತದ ಪ್ರಗತಿ ಸಾಧ್ಯ. ಹೀಗಾಗಿ ನನ್ನ ಬಳಿ ಇರುವ ಸಮಯದಲ್ಲಿ ಉತ್ತಮ ಕೆಲಸ ಮಾಡಿ, ಪಕ್ಷವನ್ನು ಸಂಘಟಿಸಿ, ದೇಶಕ್ಕೆ ಸಂದೇಶ ನೀಡಬೇಕು. ಕರ್ನಾಟಕವನ್ನು ಇತರ ರಾಜ್ಯಗಳಿಗೆ ಮಾದರಿಯಾಗಿಸುವ ಪ್ರಯತ್ನದಲ್ಲಿದ್ದೇನೆ,” ಎಂದು ಶಿವಕುಮಾರ್ ಹೇಳಿದರು.

Home add -Advt


ಶಾಸಕರ ಅಸಮಾಧಾನವಿಲ್ಲ


ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ಶಾಸಕರಲ್ಲಿ ಅಸಮಾಧಾನವಿದೆ ಎಂಬ ವಿಚಾರವನ್ನು ತಳ್ಳಿಹಾಕಿದ ಅವರು, “ನಮ್ಮ ಪಕ್ಷದಲ್ಲಿ ಇಂತಹ ಸಮಸ್ಯೆ ಇಲ್ಲ. ನಮ್ಮಲ್ಲಿರುವ ಎಲ್ಲ ಶಾಸಕರು ಹಾಗೂ ಎಂಎಲ್‌ಸಿಗಳು ಸಚಿವರಾಗಲು, ನಿಗಮ-ಮಂಡಳಿಗಳ ಅಧ್ಯಕ್ಷರಾಗಲು ಅರ್ಹರು. ಆದರೆ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ. ಪಕ್ಷದ ಹೈಕಮಾಂಡ್ ನಮ್ಮನ್ನು ವಿಶ್ವಾಸಕ್ಕೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುತ್ತದೆ,” ಎಂದರು.
ಹಿಂದಿನ ಸರ್ಕಾರಗಳಲ್ಲಿಯೂ ಹಿರಿಯ ನಾಯಕರು ಸಚಿವ ಸ್ಥಾನದಿಂದ ಹೊರಗುಳಿದ ಉದಾಹರಣೆಗಳಿವೆ. ರಾಜಕೀಯದಲ್ಲಿ ಎಲ್ಲವನ್ನೂ ಅರಗಿಸಿಕೊಳ್ಳಬೇಕು. ಸಚಿವ ಸ್ಥಾನಕ್ಕೆ ಆಸೆ ಪಡುವುದು ತಪ್ಪಲ್ಲ, ಆದರೆ ಪಕ್ಷದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.


ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇಲ್ಲ


“ಕಾಂಗ್ರೆಸ್ ಪಕ್ಷವೇ ಒಂದು ಬಣ. ನನಗೆ ಯಾವುದೇ ಬಣವಿಲ್ಲ, ಸಿದ್ದರಾಮಯ್ಯ ಅವರಿಗೂ ಯಾವುದೇ ಬಣವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸಿದ್ದರಾಮಯ್ಯ ಅವರನ್ನು ಸೇರಿಸಿ ನನ್ನ ಸಂಖ್ಯೆ 138 ಎಂದು ಸದನದಲ್ಲೇ ಹೇಳಿದ್ದೇನೆ. ಬಣ ರಾಜಕೀಯ ಬಿಜೆಪಿಯಲ್ಲಿ ನಡೆಯಬಹುದು, ಕಾಂಗ್ರೆಸ್‌ನಲ್ಲಿ ನಡೆಯುವುದಿಲ್ಲ. ನಾವು ಪಕ್ಷದ ಸೇನಾನಿಗಳಾಗಿ ಕೆಲಸ ಮಾಡುತ್ತೇವೆ,” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಲ್ಲರನ್ನು ಸಮಾನವಾಗಿ ಕಾಣುವುದು ಸರ್ಕಾರದ ಕರ್ತವ್ಯ
ಮುಖ್ಯಮಂತ್ರಿಯಾದ ಬಳಿಕ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿರುವ ಕುರಿತು ಮಾತನಾಡಿದ ಅವರು, “ನಾನು ಕಾಂಗ್ರೆಸ್ ಪಕ್ಷದಿಂದ ಬಂದಿದ್ದರೂ ಇಡೀ ರಾಜ್ಯದ ಮುಖ್ಯಮಂತ್ರಿ. ಈ ಸ್ಥಾನದಲ್ಲಿ ಕುಳಿತಾಗ ಸಮಾಜದ ಎಲ್ಲ ವರ್ಗದವರನ್ನು ಒಟ್ಟಾಗಿ ಕರೆದುಕೊಂಡು ಹೋಗಬೇಕು. ಅದನ್ನೇ ಪ್ರಮಾಣವಚನ ಸ್ವೀಕರಿಸುವಾಗ ಹೇಳಿದ್ದೇವೆ. ನ್ಯಾಯದ ಪೀಠದಲ್ಲಿ ಕುಳಿತು ಅನ್ಯಾಯ ಮಾಡಬಾರದು. ಆಡಳಿತದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು,” ಎಂದರು.
ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ
ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಶಿವಕುಮಾರ್, ಕರ್ನಾಟಕ ದೇಶದ ಜಿಡಿಪಿ ಹಾಗೂ ತೆರಿಗೆ ಆದಾಯಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ ಕ್ಷೇತ್ರ ಮರುವಿಂಗಡಣೆ ಹಾಗೂ ಅನುದಾನ ಹಂಚಿಕೆಯಲ್ಲಿ ಜನಸಂಖ್ಯೆ ಆಧಾರವನ್ನು ಬಳಸುವುದರಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂದರು.
“ನಾವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಜನಸಂಖ್ಯೆ ನಿಯಂತ್ರಣ ಮಾಡಿದ್ದೇವೆ. ಈಗ ಕ್ಷೇತ್ರ ಮರುವಿಂಗಡಣೆ ಹಾಗೂ ಅನುದಾನ ಹಂಚಿಕೆಯನ್ನು ಜನಸಂಖ್ಯೆ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ. ಇದರಿಂದ ನಮಗೆ ಅನ್ಯಾಯವಾಗುತ್ತದೆ. ಹಾಲಿ ಕ್ಷೇತ್ರಗಳ ಸಂಖ್ಯೆಯನ್ನು ಉಳಿಸಿಕೊಂಡೇ ಮಹಿಳಾ ಮೀಸಲಾತಿ ನೀಡಬೇಕು. ಕ್ಷೇತ್ರಗಳ ಸಂಖ್ಯೆ ಹೆಚ್ಚಿಸಿದರೆ ದಕ್ಷಿಣ ಭಾರತದ ಧ್ವನಿ ಹತ್ತಿಕ್ಕುವಂತಾಗುತ್ತದೆ,” ಎಂದು ಹೇಳಿದರು.
ಈ ವಿಚಾರದಲ್ಲಿ ತಮಿಳುನಾಡು, ತೆಲಂಗಾಣ ಹಾಗೂ ಕೇರಳದ ಮುಖ್ಯಮಂತ್ರಿಗಳೂ ತಮ್ಮೊಂದಿಗೆ ಧ್ವನಿಗೂಡಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಸಂಚಾರ ಸಮಸ್ಯೆಗೆ ಟನಲ್, ಎಲಿವೇಟೆಡ್ ಕಾರಿಡಾರ್
ಬೆಂಗಳೂರಿನ ಮೂಲಸೌಕರ್ಯದ ಕುರಿತು ಮಾತನಾಡಿದ ಅವರು, ನಗರದಲ್ಲಿ ಸುಮಾರು 1.35 ಕೋಟಿ ವಾಹನಗಳು ಹಾಗೂ 1.40 ಕೋಟಿ ಜನಸಂಖ್ಯೆ ಇರುವುದರಿಂದ ಪ್ರಸ್ತುತ ರಸ್ತೆಗಳು ವಾಹನ ದಟ್ಟಣೆಯನ್ನು ನಿಭಾಯಿಸಲು ಕಷ್ಟವಾಗುತ್ತಿದೆ ಎಂದರು.
“ರಸ್ತೆಗುಂಡಿಗಳ ಸಮಸ್ಯೆ ಬೇರೆ ನಗರಗಳಲ್ಲೂ ಇದೆ. ಬೆಂಗಳೂರಿನಲ್ಲಿ ಇದಕ್ಕೆ ಪರಿಹಾರವಾಗಿ ವೈಟ್ ಟಾಪಿಂಗ್ ರಸ್ತೆಗಳ ಕಾಮಗಾರಿ ಕೈಗೊಂಡಿದ್ದು, ಶೇ.60ರಷ್ಟು ರಸ್ತೆಗಳ ವೈಟ್ ಟಾಪಿಂಗ್ ಪೂರ್ಣಗೊಂಡಿದೆ. ಸಂಚಾರ ದಟ್ಟಣೆ ನಿವಾರಣೆಗೆ 47 ಕಿ.ಮೀ. ಟನಲ್ ರಸ್ತೆ ಹಾಗೂ 115 ಕಿ.ಮೀ. ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಮುಂದಾಗಿದ್ದೇವೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ,” ಎಂದು ಹೇಳಿದರು.
ಬೆಂಗಳೂರು ಗಳಿಸುವ ಆದಾಯದ ಮೂಲಕ ಗ್ರಾಮೀಣ ಭಾಗಗಳ ಅಭಿವೃದ್ಧಿಗೂ ಸಹಾಯವಾಗಲಿದೆ. ಬೆಂಗಳೂರು ಮತ್ತು ಗ್ರಾಮೀಣ ಭಾಗಗಳ ಸಮಗ್ರ ಅಭಿವೃದ್ಧಿ ಸರ್ಕಾರದ ಆದ್ಯತೆಯಾಗಿದೆ ಎಂದು ಹೇಳಿದರು.


ಪಾರ್ಕ್ ಜಾಗ ಖಾಸಗಿಯವರಿಗೆ ನೀಡಿಲ್ಲ


ಪಾರ್ಕ್ ಜಾಗಗಳ ಬಳಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲವು ಪಾರ್ಕ್‌ಗಳನ್ನು ಸಂಘಟನೆಗಳು ಹಾಗೂ ಪಕ್ಷದ ಕಾರ್ಯಕರ್ತರ ಚಟುವಟಿಕೆಗಳಿಗೆ ನೀಡಲಾಗಿತ್ತು ಎಂದು ಆರೋಪಿಸಿದರು.
“ನಾವು ಕೇವಲ ಶೇ.5ರಷ್ಟು ಬಯಲು ಪ್ರದೇಶವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುತ್ತಿದ್ದೇವೆ. ಖಾಸಗಿಯವರಿಗೆ ನೀಡಿಲ್ಲ. ಅಕ್ರಮ ಒತ್ತುವರಿ ತಡೆಯಲು ಮಸೂದೆ ತಂದಿದ್ದೇವೆ. ನನ್ನ ಅವಧಿಯಲ್ಲಿ ಲಾಲ್‌ಬಾಗ್ ಮಾದರಿಯ ಐದು ವೃಕ್ಷೋದ್ಯಾನಗಳನ್ನು ನಿರ್ಮಿಸಲು ಮುಂದಾಗಿದ್ದೇವೆ. ಮುಂದಿನ 18 ತಿಂಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿ ನಿಮ್ಮ ಮುಂದೆ ಬರುತ್ತೇನೆ,” ಎಂದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೂ ಪ್ರಯೋಜನ
ಮೇಕೆದಾಟು ಯೋಜನೆಯ ಕುರಿತು ಮಾತನಾಡಿದ ಅವರು, ಯೋಜನೆಯಿಂದ ಶೇಖರಣೆಯಾಗುವ ಶೇ.95ರಷ್ಟು ನೀರು ತಮಿಳುನಾಡಿಗೆ ಹರಿಯಲಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಮಾತ್ರ ನೀರನ್ನು ಬಳಸಲಾಗುವುದು. ನೀರಾವರಿಗೆ ಒಂದು ಹನಿ ನೀರನ್ನೂ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ತಮಿಳುನಾಡಿನ ಪಾಲಿನ 177 ಟಿಎಂಸಿ ನೀರನ್ನು ಹರಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ನೆಲದಲ್ಲಿ ನಮ್ಮ ಯೋಜನೆ ಕೈಗೊಳ್ಳಲು ಯಾರ ಅಪ್ಪಣೆಯೂ ಬೇಕಿಲ್ಲ ಎಂದು ನ್ಯಾಯಾಲಯ ಹೇಳಿದೆ,” ಎಂದರು.
ತುಂಗಭದ್ರಾ ವಿಚಾರದಲ್ಲಿ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ನೇತೃತ್ವದಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದಾರೆ. ಎಲ್ಲ ಸಮಸ್ಯೆಗಳೂ ನ್ಯಾಯಾಲಯದಲ್ಲಿ ಬಗೆಹರಿಯುವುದಿಲ್ಲ. ಕೂತು ಚರ್ಚಿಸಿದರೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.


ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿಲ್ಲ


ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡದಿರುವುದನ್ನು ಪ್ರಶ್ನಿಸಿದ ಅವರು, ನಾಲ್ಕು ವರ್ಷಗಳ ಹಿಂದೆ ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರು ₹5,400 ಕೋಟಿ ಘೋಷಿಸಿದ್ದರು. ಅದರ ಆಧಾರದ ಮೇಲೆ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ನಯಾಪೈಸೆಯನ್ನೂ ನೀಡಿಲ್ಲ ಎಂದು ಆರೋಪಿಸಿದರು.
“ಜನರು ಬಿಜೆಪಿಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ರಾಜ್ಯವನ್ನು ಈ ರೀತಿ ನಡೆಸಿಕೊಳ್ಳುವುದು ನ್ಯಾಯವೇ?” ಎಂದು ಪ್ರಶ್ನಿಸಿದರು.


ನಾಗೇಂದ್ರ ವಿಚಾರದಲ್ಲಿ ಸರ್ಕಾರದ ಸಮರ್ಥನೆ


ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರವಾಗಿ ಮಾತನಾಡಿದ ಶಿವಕುಮಾರ್, ಸಚಿವ ಬಿ. ನಾಗೇಂದ್ರ ವಿರುದ್ಧದ ಪ್ರಕರಣದ ಕುರಿತು ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡರು.
“ನಾಗೇಂದ್ರ ಅವರು ಕಳೆದ ಎರಡು ವರ್ಷಗಳಿಂದ ಸಂಪುಟದಿಂದ ಹೊರಗಿದ್ದರು. ಇಲಾಖೆಯ ಆಂತರಿಕ ತನಿಖೆಯಲ್ಲಿ ಪ್ರಕರಣದಲ್ಲಿ ಅವರ ಕೈವಾಡ ಇಲ್ಲ ಎಂದು ವರದಿ ಬಂದಿದೆ. ಹೀಗಾಗಿ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿದ್ದೇವೆ. ಸಿಬಿಐ ಮತ್ತು ಇಡಿ ಮಧ್ಯಪ್ರವೇಶಿಸುವ ಮುನ್ನವೇ ಬಿ-ರಿಪೋರ್ಟ್ ಸಲ್ಲಿಸುವ ಪ್ರಕ್ರಿಯೆ ಇತ್ತು. ತನಿಖಾ ಸಂಸ್ಥೆಗಳು ನಾಗೇಂದ್ರ ಅವರ ಮನೆಯಲ್ಲಿ ಒಂದು ರೂಪಾಯಿಯನ್ನೂ ಪತ್ತೆ ಮಾಡಿಲ್ಲ. ಹಗರಣದಲ್ಲಿ ಲೂಟಿಯಾಗಿದ್ದ ಶೇ.95ರಷ್ಟು ಹಣವನ್ನು ವಾಪಸ್ ಪಡೆಯಲಾಗಿದೆ,” ಎಂದು ಹೇಳಿದರು.


ಯುವಕರಿಗೆ ಉದ್ಯೋಗದ ಜೊತೆಗೆ ಉದ್ಯೋಗ ಸೃಷ್ಟಿಸುವ ಅವಕಾಶ


ಯುವ ಪೀಳಿಗೆಯೇ ದೇಶದ ಭವಿಷ್ಯವಾಗಿದ್ದು, ಯುವಕರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರೇ ಉದ್ಯೋಗ ಸೃಷ್ಟಿಸುವಂತೆ ಪ್ರೋತ್ಸಾಹಿಸಬೇಕು ಎಂದು ಶಿವಕುಮಾರ್ ಹೇಳಿದರು.
“ಯುವಕರಿಗೆ ಅವಕಾಶ ನೀಡದೆ ದೇಶದ ಪ್ರಗತಿ ಸಾಧ್ಯವಿಲ್ಲ. ಯುವಕರಲ್ಲಿ ಸಾಮಾಜಿಕ ಸಾಮರಸ್ಯ ಬೆಳೆಸಬೇಕು. ಅವರನ್ನು ಮಾದಕ ವ್ಯಸನ ಹಾಗೂ ಇತರ ದುಶ್ಚಟಗಳಿಂದ ದೂರವಿಟ್ಟು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಬೇಕು,” ಎಂದರು.
ರಾಜ್ಯಾದ್ಯಂತ 10 ಸಾವಿರ ‘ಭಾರತ ಜೋಡೋ ಯುವ ಸಂಘ’ಗಳನ್ನು ರಚಿಸಲು ಮುಂದಾಗಿದ್ದು, ರಾಜಕೀಯ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಯುವ ನಾಯಕರನ್ನು ಬೆಳೆಸುವ ಉದ್ದೇಶವಿದೆ ಎಂದು ತಿಳಿಸಿದರು.


ಎಲ್ಲ ಸಮುದಾಯಗಳನ್ನೂ ಗೌರವಿಸುತ್ತೇವೆ


ಧಾರ್ಮಿಕ ಓಲೈಕೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ನನ್ನ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಇಲಾಖೆಯನ್ನು ಮುಚ್ಚಬೇಕೇ? ದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಯೂ ನಮ್ಮ ಕರ್ತವ್ಯ. ಅವರೂ ಭಾರತೀಯರು. ನಾವು ಎಲ್ಲ ಸಮುದಾಯಗಳನ್ನೂ ಗೌರವಿಸುತ್ತೇವೆ,” ಎಂದರು.
ವಂದೇ ಮಾತರಂ ವಿಚಾರದಲ್ಲಿ ಪಕ್ಷದ ಸಿದ್ಧಾಂತ ಹಾಗೂ ತೀರ್ಮಾನಕ್ಕೆ ಕಾಂಗ್ರೆಸ್ ಬದ್ಧವಾಗಿದ್ದು, ಮುಂದಿನ ದಿನಗಳಲ್ಲೂ ಅದನ್ನೇ ಪಾಲಿಸಲಾಗುವುದು ಎಂದು ಹೇಳಿದರು.
ಅರ್ಹ ಮತದಾರರ ಹಕ್ಕು ರಕ್ಷಿಸುವುದು ನಮ್ಮ ಕರ್ತವ್ಯ
ಎಸ್‌ಐಆರ್ ವಿಚಾರವಾಗಿ ಪ್ರತಿಯೊಬ್ಬ ಅರ್ಹ ಮತದಾರನ ಮತದಾನದ ಹಕ್ಕನ್ನು ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಶಿವಕುಮಾರ್ ಹೇಳಿದರು. ಮತದಾನದ ಹಕ್ಕು ರಕ್ಷಣೆಯ ಉದ್ದೇಶದಿಂದ ನಿವಾಸ ದೃಢೀಕರಣ ಹಾಗೂ ಜಾತಿ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.


2028ರಲ್ಲಿ ಮತ್ತೆ ಅಧಿಕಾರಕ್ಕೆ, 2029ರಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನ


2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಈಗಿರುವುದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, 2029ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವುದಾಗಿ ಹೇಳಿದರು.
“ದೇಶದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.


‘ನಾನು ಅಮಿತ್ ಶಾ ಆಗಲು ಬಯಸುವುದಿಲ್ಲ’


ಎಂಎಲ್‌ಸಿ ಚುನಾವಣೆಯ ವಿಚಾರದಲ್ಲಿ ಮಾತನಾಡಿದ ಅವರು, “ನಾನು ಅಮಿತ್ ಶಾ ಆಗಲು ಬಯಸುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಪಕ್ಷ ನನಗೆ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ,” ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಒಡೆಯಲು ತಾವು ಕಾರಣರಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಶಾಸಕರಲ್ಲಿಯೂ ಕಾಂಗ್ರೆಸ್ ಸರ್ಕಾರದ ಬಗ್ಗೆ ವಿಶ್ವಾಸವಿದೆ. ಇದೇ ಕಾರಣಕ್ಕೆ ವಿರೋಧ ಪಕ್ಷಗಳ 12 ಶಾಸಕರು ತಮ್ಮ ಆತ್ಮಸಾಕ್ಷಿಯ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೀಡಿದ್ದಾರೆ ಎಂದು ಹೇಳಿದರು.
ಈ ಕುರಿತು ವಿರೋಧ ಪಕ್ಷಗಳು ತನಿಖೆ ನಡೆಸಿದ್ದರೂ ಅದರ ವರದಿ ಏನಾಯಿತು ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೇ ಕೊನೆಗೆ “ನನಗೆ ಮೊದಲೇ ಸೋಲು ಗೊತ್ತಿತ್ತು; ಶಾಸಕರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ” ಎಂದು ಹೇಳಿದ್ದರು ಎಂದು ನೆನಪಿಸಿದರು.


‘ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚರಿಗಳು’


ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮತ್ತಷ್ಟು ಅಚ್ಚರಿಯ ಬೆಳವಣಿಗೆಗಳು ಹಾಗೂ ಬದಲಾವಣೆಗಳು ಖಂಡಿತವಾಗಿಯೂ ನಡೆಯಲಿವೆ ಎಂದು ಡಿ.ಕೆ. ಶಿವಕುಮಾರ್ ಇದೇ ಸಂದರ್ಭದಲ್ಲಿ ಸುಳಿವು ನೀಡಿದರು.

Related Articles

Back to top button