Karnataka NewsLatestPolitics

*ಇಂದು ಸಂಜೆ ಸಿಎಂ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿ; ನಾಗೇಂದ್ರ ರಾಜೀನಾಮೆ? ಬಿಜೆಪಿ ಆರೋಪಗಳಿಗೆ ತಿರುಗೇಟು?*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಸುಮಾರು 6 ಗಂಟೆಗೆ ಬೆಂಗಳೂರಿನ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಮುಖ್ಯಮಂತ್ರಿ ಕಚೇರಿಯಿಂದ ಪ್ರಕಟವಾಗಿರುವ ಈ ಸುದ್ದಿಗೋಷ್ಠಿ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


ಇಂದು ನಡೆದ ಇಂಡಿಯಾ ಟುಡೇ ರೌಂಡ್ ಟೇಬಲ್ ಕರ್ನಾಟಕ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ವಿಚಾರಗಳ ಕುರಿತು ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಸಚಿವ ಬಿ. ನಾಗೇಂದ್ರ ಅವರ ವಿಚಾರದಲ್ಲಿಯೂ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದರು. ನಾಗೇಂದ್ರ ವಿರುದ್ಧದ ಪ್ರಕರಣದಲ್ಲಿ ಇಲಾಖೆಯ ಆಂತರಿಕ ತನಿಖೆ, ತನಿಖಾ ಸಂಸ್ಥೆಗಳ ಕ್ರಮ ಹಾಗೂ ವಾಪಸ್ ಪಡೆದ ಹಣದ ಕುರಿತು ಅವರು ಸರ್ಕಾರದ ಪರವಾಗಿ ಸಮರ್ಥನೆ ನೀಡಿದ್ದರು.

Home add -Advt


ಇದರ ಬೆನ್ನಲ್ಲೇ ಸಂಜೆ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರವಾಗದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಲಿದ್ದಾರೆಯೇ? ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.


ಇನ್ನೊಂದೆಡೆ, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಎತ್ತಿರುವ ವಿವಿಧ ಆರೋಪಗಳು ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣ ತಿರುಗೇಟು ನೀಡಲಿದ್ದಾರೆಯೇ? ಎಂಬ ಕುತೂಹಲವೂ ಮೂಡಿದೆ.


ಸಂಪುಟ ವಿಸ್ತರಣೆ, ಮಹಿಳಾ ಸಚಿವರಿಗೆ ಸ್ಥಾನ, ರಾಜ್ಯದ ಅಭಿವೃದ್ಧಿ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ನೀರಾವರಿ ಯೋಜನೆಗಳು ಹಾಗೂ ವಿರೋಧ ಪಕ್ಷಗಳ ಆರೋಪಗಳು ಸೇರಿದಂತೆ ಹಲವು ವಿಚಾರಗಳು ರಾಜಕೀಯವಾಗಿ ಚರ್ಚೆಯಲ್ಲಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಸುದ್ದಿಗೋಷ್ಠಿ ಮಹತ್ವ ಪಡೆದುಕೊಂಡಿದೆ.
ಸಂಜೆ 6 ಗಂಟೆಯ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಾವ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ, ಯಾವುದೇ ಮಹತ್ವದ ಘೋಷಣೆ ಮಾಡಲಿದ್ದಾರೆಯೇ ಎಂಬುದು ಇದೀಗ ರಾಜಕೀಯ ವಲಯದ ಕುತೂಹಲಕ್ಕೆ ಕಾರಣವಾಗಿದೆ.

Related Articles

Back to top button