*ಆರೋಗ್ಯವಾಗಿರಲು ಸರಳ ಮತ್ತು ಪೌಷ್ಟಿಕ ಆಹಾರ ಉತ್ತಮ: ಪದ್ಮಶ್ರೀ ಪ್ರಭಾಕರ ಕೋರೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತದ ಪರಂಪರೆಯಲ್ಲಿ ಬೆಳಗಿನ ಉಪಾಹಾರದ ಪದ್ಧತಿ ಇರಲಿಲ್ಲ. ಹಸಿವಾದಾಗ ಕಡಲೆಕಾಯಿ ಅಥವಾ ಇತರ ಸರಳ ಆಹಾರವನ್ನು ಸೇವಿಸುತ್ತಿದ್ದೆವು. ಇಂದು ನನಗೆ 80 ವರ್ಷವಾದರೂ ಆರೋಗ್ಯವಾಗಿರಲು, ಸರಳ ಮತ್ತು ಪೌಷ್ಟಿಕ ಆಹಾರವೂ ಉತ್ತಮ ಆರೋಗ್ಯಕ್ಕೆ ಸಹಾಯಕವಾಗಬಹುದು. ರಾಗಿ ಸೇರಿದಂತೆ ಸ್ಥಳೀಯ ಸಿರಿಧಾನ್ಯಗಳಿಂದ ತಯಾರಿಸಿದ ಪೌಷ್ಟಿಕ ಅತ್ಯುತ್ತಮ. ಈ ಆಹಾರಗಳು ಕಡಿಮೆ ವೆಚ್ಚದಲ್ಲಿ ದೊರೆಯುತ್ತವೆ ಮತ್ತು ಮಕ್ಕಳ ಪೌಷ್ಟಿಕತೆಗೆ ಬಹಳ ಉಪಯುಕ್ತವಾಗಿವೆ ಕಾಹೆರನ ಕುಲಪತಿ ಪದ್ಮಶ್ರೀ ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆಂಡ ರಿಸರ್ಚನ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಮಕ್ಕಳ ವಿಭಾಗವು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ, ನ್ಯಾಶನಲ್ ಇನ್ಫ್ಯಾಂಟ ಆಂಡ ಯಂಗ ಚೈಲ್ಡ್ ಪೀಡಿಂಗ ರಾಜ್ಯ ಘಟಕ ಹಾಗೂ ಬೆಳಗಾವಿ ಅಸೋಸಿಯೇಷನ್ ಆಫ್ ಪೀಡಿಯಾಟ್ರಿಕ್ಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ 16ನೇ ವಾರ್ಷಿಕ ಸಮ್ಮೇಳನ ‘IYCNCON 2026’ ದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇಶಕ್ಕೆ ಪೌಷ್ಟಿಕ ಆಹಾರಗಳು ಅತ್ಯಗತ್ಯ. ದೇಶವು ವಿಜ್ಞಾನ, ತಂತ್ರಜ್ಞಾನ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಬಹಳ ಮುಂದಿದೆ. ಆರೋಗ್ಯಕರ ರಾಷ್ಟ್ರವನ್ನಾಗಿ ಯುವ ಪೀಳಿಗೆಯ ಆರೋಗ್ಯ ಮತ್ತು ಮಕ್ಕಳ ಪೌಷ್ಟಿಕತೆಗಾಗಿ ಕೆಲಸ ಮಾಡಬೇಕಾಗಿದೆ. ಆಧುನಿಕ ಜೀವನಶೈಲಿಯಲ್ಲಿ ತಂದೆ-ತಾಯಿ ಇಬ್ಬರೂ ಕೆಲಸ ಮಾಡುವುದರಿಂದ ಮಕ್ಕಳ ಆಹಾರವು ತ್ವರಿತ ಮತ್ತು ಅಪೌಷ್ಟಿಕವಾಗುತ್ತಿದ್ದು, ಆರೋಗ್ಯಕರ ಜನಸಂಖ್ಯೆಯನ್ನು ನಿರ್ಮಿಸುವುದು ಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಐಎಪಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಜಿ ವಿ ಬಸವರಾಜ ಅವರು ಮಾತನಾಡಿ, ಪೌಷ್ಟಿಕಾಂಶವು ಅತ್ಯಂತ ಪ್ರಮುಖ ಪಾತ್ರವಹಿಸುತ್ತಿದ್ದು, ಕೇವಲ ಮಕ್ಕಳ ವೈದ್ಯರ ವಿಷಯವಲ್ಲ. ಪೌಷ್ಟಿಕಾಂಶ ತಜ್ಞರು, ಆರೋಗ್ಯ ತಜ್ಞರು, ನೀತಿ ನಿರೂಪಕರೆಲ್ಲರೂ ಸೇರಿ ಸಮುದಾಯ ಮಟ್ಟದಲ್ಲಿ, ಮಕ್ಕಳ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಪ್ರಾಥಮಿಕ ಆರೈಕೆ ವೈದ್ಯರಲ್ಲಿ ವರ್ತನಾ ಬದಲಾವಣೆಯನ್ನು ತರುವುದು ಅತ್ಯಂತ ಮುಖ್ಯ. ಅನಾರೋಗ್ಯದಿಂದ ಆರೋಗ್ಯ ಮತ್ತು ಕ್ಷೇಮದ ಕಡೆಗೆ ಸಾಗುತ್ತಿದೆ ಎಂದರು.
ಸುಸ್ಥಿರ ಅಭಿವೃದ್ಧಿಯಾಗಬೇಕಾದರೆ ಉತ್ತಮ ಪೌಷ್ಟಿಕತೆ, ಸರಿಯಾದ ಬೆಳವಣಿಗೆ ಮತ್ತು ಮಗುವಿನ ಸಮಗ್ರ ಅಭಿವೃದ್ಧಿ ಒಳಗೊಂಡಿದೆ. ಬಾಲ್ಯಾಭಿವೃದ್ದಿಯಲ್ಲಿ ಪೌಷ್ಟಿಕತೆ, ಬೆಳವಣಿಗೆ ಪ್ರತಿಕ್ರಿಯಾತ್ಮಕ ಆರೈಕೆ, ಸುರಕ್ಷಿತ, ಭದ್ರ ವಾತಾವರಣ ಮತ್ತು ಸಮಗ್ರ ಅಭಿವೃದ್ಧಿ ಪ್ರಮುಖವಾಗಿದೆ. ಆರು ತಿಂಗಳ ನಂತರ ಮಕ್ಕಳಿಗೆ ನೀಡುವ ಪೂರಕ ಆಹಾರದ ಗುಣಮಟ್ಟ ಮತ್ತು ಸಮರ್ಪಕತೆ ದೊಡ್ಡ ಸವಾಲಾಗಿದೆ. ಮಗುವಿನ ಬೌದ್ಧಿಕ ಬೆಳವಣಿಗೆ, ಜ್ಞಾನಾತ್ಮಕ ಸಾಮರ್ಥ್ಯ ಮತ್ತು ಭವಿಷ್ಯದ ಚಯಾಪಚಯ ಆರೋಗ್ಯ ಕೂಡ ಗಮನದಲ್ಲಿರಬೇಕು. ಭವಿಷ್ಯದಲ್ಲಿ ಸ್ಥೂಲಕಾಯತೆ ಮತ್ತು ಇತರ ಚಯಾಪಚಯ ಸಂಬಂಧಿತ ಸಮಸ್ಯೆಗಳನ್ನೂ ಕಡಿಮೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಐಎಪಿ ಅಧ್ಯಕ್ಷರಾದ ಡಾ. ರವಿಶಂಕರ ಮಾರ್ಪಳ್ಳಿ ಅವರು ಮಾತನಾಡಿ, ಪ್ರಾಚೀನ ಭಾರತೀಯ ಪರಂಪರೆಯಲ್ಲಿ ಆಹಾರ ಪದ್ಧತಿಯ ಜ್ಞಾನವಿತ್ತು. ಆದರೆ ಮಕ್ಕಳ ಆಹಾರ ಪದ್ಧತಿ ವಿಭಿನ್ನವಾಗಿತ್ತು. ಮಕ್ಕಳು ಆಗಾಗ್ಗೆ ಆಹಾರ ಸೇವಿಸುವ ಪದ್ಧತಿ ಇತ್ತು. ಪುರಾಣ, ಪರಂಪರೆಯಲ್ಲಿಯೂ ಹಾಲು, ಬೆಣ್ಣೆ, ತುಪ್ಪ, ಬೇಳೆ ಮುಂತಾದ ಪೌಷ್ಟಿಕ ಆಹಾರಗಳಿಗೆ ಮಹತ್ವ ನೀಡಲಾಗುತ್ತಿತ್ತು. 1960ರ ದಶಕದಲ್ಲಿ ಪಾಶ್ಚಾತ್ಯ ದೇಶಗಳಿಂದ ಹಾಲಿನ ಪುಡಿ ಮತ್ತು ಫಾರ್ಮುಲಾ ಆಹಾರಗಳ ಬಳಕೆ ಭಾರತದಲ್ಲಿ ಹೆಚ್ಚಾಗತೊಡಗಿತು. ಆಗ ಅನೇಕ ತಾಯಂದಿರು ಅವುಗಳನ್ನು ಅತ್ಯಂತ ಪೌಷ್ಟಿಕವೆಂದು ಭಾವಿಸಿದರು ಎಂದು ತಿಳಿಸಿದರು.
ಡಾ. ಸಿ ಆರ್ ಬಾನಾಪೂರಮಠ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು. ಉಪಕುಲಪತಿ ಪ್ರೊ. (ಡಾ.) ಸಂದೀಪ್ ಶ್ರೀವಾಸ್ತವ, ಡಾ. ಆದರ್ಶ ಇ, ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ವಿ ಡಿ ಪಾಟೀಲ, ಡಾ. ಕರ್ನಲ್ ಎಂ ದಯಾನಂದ, ಡಾ. ರೂಪಾ ಬೆಲ್ಲದ, ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ವಿರೇಶ ಮಾನ್ವಿ, ಡಾ. ತನ್ಮಯಾ ಮೆಟಗುಡ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.



