*ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯದ ಬೆಳಕು: ಪ್ರಾದೇಶಿಕ ಆಯುಕ್ತೆ ಕೆ. ಎಂ.ಜಾನಕಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರತಿ ದಿನವೂ ಶಿಕ್ಷಕರನ್ನು ಸ್ಮರಿಸಬೇಕು, ತಂದೆ-ತಾಯಿಯ ನಂತರ ಯಾವುದೇ ವೃತ್ತಿ ಅಥವಾ ಜ್ಞಾನವನ್ನು ಕಲಿಯಲು ಗುರುಗಳ ಮಾರ್ಗದರ್ಶನ ಅತ್ಯಗತ್ಯವಾಗಿದ್ದು ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯದ ಬೆಳಕು ಎಂದು ಪ್ರಾದೇಶಿಕ ಆಯುಕ್ತರಾದ ಕೆ.ಎಂ. ಜಾನಕಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬೆಳಗಾವಿ ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ(ದಕ್ಷಿಣ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ನಗರ ವಲಯ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ(ಸೆ.05) ನಗರದ ಕಾಲೇಜು ರಸ್ತೆ ಗಾಂಧಿ ಭವನದಲ್ಲಿ ಜರುಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಬೆಳಗಾವಿ (ದಕ್ಷಿಣ) ಜಿಲ್ಲಾ ಮಟ್ಟದ ಮತ್ತು ಬೆಳಗಾವಿ ನಗರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ ಹಾಗೂ ಕ್ರೀಡಾ ಕೂಟಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳ ಬದುಕಿನಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ನಮಗೆ ತಿಳಿಯದ ಜಗತ್ತನ್ನು ಪರಿಚಯಿಸಿ, ಜ್ಞಾನವನ್ನು ಹಂಚಿ, ಜೀವನದ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಬೆಳೆಸುವವರು ಶಿಕ್ಷಕರು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕೇವಲ ಪಠ್ಯ ಜ್ಞಾನವನ್ನಷ್ಟೇ ಬೆಳೆಸದೆ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಪ್ರಶ್ನಿಸುವ ಮನೋಭಾವವನ್ನು ಬೆಳೆಸುವುದು ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ.
ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದಾಗ ಶಿಕ್ಷಕರು ಆಳವಾಗಿ ಆಲೋಚಿಸಿ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಉತ್ತರಿಸಬೇಕು. ವಿದ್ಯಾರ್ಥಿಯ ಪ್ರಶ್ನೆಯನ್ನು ಪ್ರೋತ್ಸಾಹಿಸುವುದು ಅವರಲ್ಲಿ ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಕುತೂಹಲವನ್ನು ಹೆಚ್ಚಿಸುತ್ತದೆ. ಪ್ರಶ್ನಿಸುವ ವಿದ್ಯಾರ್ಥಿಯೇ ಮುಂದೆ ವಿಚಾರಶೀಲ ಹಾಗೂ ಜವಾಬ್ದಾರಿಯುತ ನಾಗರಿಕನಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆಯ ಹಿಂದೆ ಗುರುವಿನ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಪರಿಶ್ರಮ ಅಡಗಿರುತ್ತದೆ. ವಿದ್ಯಾರ್ಥಿಯ ಸಾಮರ್ಥ್ಯವನ್ನು ಗುರುತಿಸಿ, ಅವರ ಆಸಕ್ತಿ ಮತ್ತು ಪ್ರತಿಭೆಗೆ ಅನುಗುಣವಾಗಿ ಮಾರ್ಗದರ್ಶನ ನೀಡಿದಾಗ ಅವರ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿಯರ ಪಾತ್ರ ಎಷ್ಟು ಮಹತ್ವದ್ದೋ, ಶಿಕ್ಷಣದ ಹಂತದಲ್ಲಿ ಶಿಕ್ಷಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ ಎಂದು ಹೇಳಿದರು.
ಶಿಕ್ಷಕರು ಪಾಠ ಬೋಧಿಸುವವರಷ್ಟೇ ಅಲ್ಲ ಅವರು ವಿದ್ಯಾರ್ಥಿಗಳಲ್ಲಿ ಮೌಲ್ಯಗಳು, ಶಿಸ್ತು, ಮಾನವೀಯತೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುವ ಮಾರ್ಗದರ್ಶಕರು ಹೀಗಾಗಿ “ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಬದುಕಿನ ದಾರಿಯನ್ನು ತೋರಿಸುವ ದಾರಿದೀಪ” ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ನಿಸ್ವಾರ್ಥ ಸೇವೆ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸಬೇಕು ಎಂದು ಆಯುಕ್ತರಾದ ಕೆ. ಎಂ. ಜಾನಕಿ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಶಾಸಕರಾದ ಆಸಿಫ್ (ರಾಜು) ಸೇಶ್ ಅವರು ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕದ ಜ್ಞಾನವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿಗೆ ದಾರಿದೀಪವಾಗಿ, ಅವರ ಪ್ರತಿಭೆಯನ್ನು ಗುರುತಿಸಿ, ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ವಿಷಯವಾರು ಶಿಕ್ಷಕರ ಅವಶ್ಯಕತೆ ಇದೆ. ಎಲ್ಲರಿಗೂ ಉತ್ತಮ ಶಿಕ್ಷಕರು ದೊರೆಯದೇ ಇರಬಹುದು. ಆದರೆ ಪ್ರತಿಯೊಂದು ಕಲಿಕೆಯ ಹಿಂದೆಯೂ ಒಬ್ಬ ಶಿಕ್ಷಕರ ಮಾರ್ಗದರ್ಶನ ಇದ್ದೇ ಇರುತ್ತದೆ. ಶಿಕ್ಷಕರಿಗಿಂತ ದೊಡ್ಡವರು ಯಾರು ಇಲ್ಲ ಎಂಬ ಮಾತು ಶಿಕ್ಷಕರ ಮಹತ್ವವನ್ನು ಸಾರುತ್ತದೆ. ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಸಂಸ್ಕಾರ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಆದ್ದರಿಂದ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಹಾಗೂ ಕಾಳಜಿಯಿಂದ ನೋಡಿಕೊಂಡು ಶಿಕ್ಷಣ ನೀಡಬೇಕು ಎಂದು ಕರೆ ನೀಡಿದರು.
ಅನೇಕ ಬಡ ಕುಟುಂಬಗಳ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸನ್ನು ಹೊಂದಿದ್ದಾರೆ ಆ ಕನಸನ್ನು ನನಸಾಗಿಸುವಲ್ಲ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಕೆಲವು ಶಾಲೆಗಳಲ್ಲಿ ಅಗತ್ಯವಾದ ಮೂಲಸೌಕರ್ಯಗಳ ಕೊರತೆ ಇದ್ದರೂ, ಅಲ್ಲಿನ ಶಿಕ್ಷಕರ ಪರಿಶ್ರಮ ಮತ್ತು ಮಕ್ಕಳ ಕಲಿಕೆಯ ಆಸಕ್ತಿಯಿಂದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸೌಲಭ್ಯಗಳಿಗಿಂತ ಶಿಕ್ಷಕರ ಸಮರ್ಪಣೆ, ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಪರಿಶ್ರಮವೇ ಮುಖ್ಯ ಎಂಬುದನ್ನು ತೋರಿಸುತ್ತದೆ.
ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ನಿಜವಾದ ರಾಷ್ಟ್ರ ನಿರ್ಮಾತೃಗಳು, ಅವರ ಜ್ಞಾನ, ಮಾರ್ಗದರ್ಶನ ಮತ್ತು ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರನ್ನು ಗೌರವಿಸಬೇಕು ಮತ್ತು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಗುರುವೇ ಜ್ಞಾನದ ಬೆಳಕು ಗುರುವೇ ಬದುಕಿನ ದಾರಿ ಶಿಕ್ಷಕರಿಗೆ ಗೌರವ ಸಲ್ಲಿಸುವುದರ ಜೊತೆಗೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂಬುದು ನಮ್ಮ ಆಶಯ ಎಂದು ಆಸೀಫ್ (ರಾಜು) ಸೇರ್ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲಾವತಿ ಹೀರೆಮಠ ಅವರು, ಶಿಕ್ಷಕರು ಮೂಲತಃ ಪ್ರತಿ ಕ್ಷಣವೂ ಸಾಮಾಜಿಕ ಕಾರ್ಯ ಮುಖಿಗಳಾಗಿರಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾತನ್ನು ಉಲ್ಲೇಖಿಸುತ್ತಾ, ವರ್ಗಕೋಣೆಯಲ್ಲಿಯೇ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯು ಶೈಕ್ಷಣಿಕವಾಗಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಶಿಕ್ಷಕರ ನಿರಂತರ ಪ್ರಯತ್ನ, ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದಲೇ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುತ್ತದೆ. ಸಾವಿತ್ರಿಬಾಯಿ ಪುಲೆ ಅವರು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಹೆಣ್ಣುಮಕ್ಕಳಿಗಾಗಿ ಶಾಲೆಗಳನ್ನು ಆರಂಭಿಸಿ, ಮಹಿಳಾ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಿದ ವಿಚಾರವನ್ನು ಸ್ಮರಿಸಿದರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪಾಠ ಬೋಧಿಸುವವರಾಗಿರದೆ ಅವರ ಜೀವನದ ಮಾರ್ಗದರ್ಶಕರಾಗಿ ಹಾಗೂ ಉತ್ತಮ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಭರಮಣ್ಣ ಉಪ್ಪಾರ, ಕ.ಪ್ರೌ.ಶಿ.ಪ ಮಂಡಳಿ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ವಿಭಾಗದ ಪದ ನಿಮಿತ್ತ ಸಹ ನಿರ್ದೇಶಕರಾದ ಜಿ.ಎಮ್. ವೃಷಬೇಂದ್ರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ವಾಯ್. ಹೆ. ಭಜಂತ್ರಿ, ಡಯಟ್ ಉಪ ನಿರ್ದೇಶಕರಾದ ಯು.ಡಿ ಹುನಕುಪ್ಪಿ, ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರಾಯವ್ವಗೋಳ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರ ವೃಂದ, ಎಸ್ ಡಿ ಎಮ್ ಸಿ ಸದಸ್ಯರು ಉಪಸ್ಥಿತರಿದ್ದರು.



