
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂತ್ಯೋದಯ ಪಡಿತರ ಚೀಟಿದಾರರಿಗೆ ಕುಟುಂಬ ಸದಸ್ಯರ ಸಂಖ್ಯೆಯನ್ನು ಆಧರಿಸಿ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತಿದ್ದು, 1 ರಿಂದ 3 ಸದಸ್ಯರು 0 ಕೆ.ಜಿ, 4 ಸದಸ್ಯರು 10 ಕೆ.ಜಿ, 5 ಸದಸ್ಯರು 30 ಕೆ.ಜಿ, 6 ಸದಸ್ಯರು 50 ಕೆ.ಜಿ, 7 ಸದಸ್ಯರು 70 ಕೆ.ಜಿ, 8 ಸದಸ್ಯರು 90 ಕೆ.ಜಿ, 9 ಸದಸ್ಯರು 110 ಕೆ.ಜಿ, 10 ಸದಸ್ಯರಿಗೆ 130 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ.
ರಾಜ್ಯ/ಕೇಂದ್ರ ಆದ್ಯತಾ (PHH) ಪಡಿತರ ಚೀಟಿದಾರರು ಪ್ರತಿ ಸದಸ್ಯರಿಗೆ 5 ಕೆ.ಜಿ + 5 ಕೆ.ಜಿ = 10 ಕೆ.ಜಿ ಅಕ್ಕಿ ನೀಡಲಾಗುತ್ತಿದ್ದು, ಪಡಿತರ ಚೀಟಿದಾರರು ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಧೃಡೀಕರಣದ ಮೂಲಕ ಆಹಾರ ಧಾನ್ಯವನ್ನು ಪಡೆಯಬೇಕು.
ವಿಶೇಷ ಸೂಚನೆ:
ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಹಿಂದೆ ಇ-ಕೆವೈಸಿ ಆಗಿರುವ ಒಟ್ಟು ಪಡಿತರ ಚೀಟಿದಾರರ ಸಂಖ್ಯೆ 22,29,900 ಇದ್ದು, ಇಲ್ಲಿಯವರೆಗೆ ಒಟ್ಟು-13,68,236 ಪಡಿತರ ಚೀಟಿದಾರರ ಇ-ಕೆವೈಸಿ ಪೂರ್ಣಗೊಂಡಿದೆ. ಉಳಿದಿರುವ 8,61,664 ಪಡಿತರ ಚೀಟಿದಾರರ ಇ-ಕೆವೈಸಿ ಕಾರ್ಯ ಬಾಕಿ ಇರುತ್ತದೆ. ಇಲ್ಲಿಯವರೆಗೆ ಇ-ಕೆವೈಸಿ ಆಗದೇ ಇರುವ ಆದ್ಯತಾ (ಬಿ.ಪಿ.ಎಲ್) ಹಾಗೂ ಆದ್ಯತೇತರ (ಎ.ಪಿ.ಎಲ್) ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರ ಆಧಾರ್ ಕಾರ್ಡ ಮತ್ತು ಆಧಾರ್ ಕಾರ್ಡಗೆ ಲಿಂಕ್ ಆಗಿರುವ ಮೊಬೈಲ್ ನಂಬರ ತೆಗೆದುಕೊಂಡು ಹೋಗಿ ಕಡ್ಡಾಯವಾಗಿ ಇ-ಕೈವೆಸಿ ಮಾಡಿಸಬೇಕು.
ಪಡಿತರ ವಿತರಣೆಯಲ್ಲಿ ಯಾವುದೇ ತೊಂದರೆ ಕಂಡು ಬಂದಲ್ಲಿ ಸಂಬಂಧಿಸಿದ ಆಹಾರ ನಿರೀಕ್ಷಕರು, ತಹಶೀಲ್ದಾರರು ಅಥವಾ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


