Belagavi NewsBelgaum NewsKannada NewsPolitics

*ರೈತರ ಒಪ್ಪಿಗೆ ಇಲ್ಲದೆ ಸಕ್ಕರೆ ಕಾರ್ಖಾನೆಗಳ ಆರಂಭ ಸಾಧ್ಯವಿಲ್ಲ*: *ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ರೈತರು ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದರೆ ಮಾತ್ರ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆ ಮಾಲೀಕರು ಯಾವುದೇ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿಲ್ಲ. ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಮ್ಮತ ಮೂಡುವುದು ಅಗತ್ಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವಿನ ದರ ನಿಗದಿ ವಿಚಾರದಲ್ಲಿ ಉಂಟಾಗಿರುವ ಗೊಂದಲಕ್ಕೆ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. ರೈತರು ಕಾರ್ಖಾನೆಗಳು ಆರಂಭವಾಗಲಿ ಎಂದು ಒಪ್ಪಿಗೆ ಸೂಚಿಸಿದರೆ ಮಾತ್ರ ಕಾರ್ಖಾನೆಗಳು ಆರಂಭವಾಗುತ್ತವೆ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಕಾರ್ಖಾನೆ ಮಾಲೀಕರು ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿಲ್ಲ. ರೈತರ ಬೇಡಿಕೆ ಹಾಗೂ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ ಎಂದರು.

ಎಂಎಸ್‌ಪಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ: ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ನಿರ್ಧರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಆದರೆ, ಕೇಂದ್ರ ಸರ್ಕಾರ ಎಂಎಸ್‌ಪಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದರೆ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಕಬ್ಬಿನ ದರ ಹೆಚ್ಚಳದ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿರ್ಧಾರವೂ ಮಹತ್ವದ್ದಾಗಿದೆ. ಎಂಎಸ್‌ಪಿ ಹೆಚ್ಚಳವಾದರೆ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಅನುಕೂಲವಾಗಲಿದೆ ಎಂಬುದು ಕಾರ್ಖಾನೆ ಮಾಲೀಕರ ಅಭಿಪ್ರಾಯವಾಗಿದೆ. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂಬ ಅಭಿಪ್ರಾಯವನ್ನು ಸಚಿವರು ವ್ಯಕ್ತಪಡಿಸಿದರು.

ಬಳ್ಳಾರಿ ನಾಲಾ ವಿಸ್ತರಣೆಯೊಂದೇ ಶಾಶ್ವತ ಪರಿಹಾರ

ಬಳ್ಳಾರಿ ನಾಲಾದಿಂದ ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಪ್ರವಾಹ ಮತ್ತು ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದರೆ ನಾಲಾವನ್ನು ವಿಸ್ತರಣೆ ಮಾಡುವುದು ಅನಿವಾರ್ಯ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುವುದರಿಂದ ಬಳ್ಳಾರಿ ನಾಲಾ ವ್ಯಾಪ್ತಿಯ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಇದರಿಂದ ಸಾರ್ವಜನಿಕರು, ರೈತರು ಹಾಗೂ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದೆ. ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುವುದರಿಂದ ಸಮಸ್ಯೆಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ. ನಾಲಾದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಗತ್ಯವಿರುವಷ್ಟು ಅಗಲೀಕರಣ ಮಾಡಬೇಕು. ನಾಲಾ ವಿಸ್ತರಣೆ ಮಾಡಿದರೆ ಮಾತ್ರ ಪ್ರವಾಹ ಮತ್ತು ಜಲಾವೃತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಹಿಂಡಲಗಾ ಜೈಲು ಚಳವಳಿ ಬಗ್ಗೆ ಮಾಹಿತಿ ಇಲ್ಲ

ಗುರ್ಲಾಪುರದಲ್ಲಿ ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ರೈತರು ಹಿಂಡಲಗಾ ಜೈಲು ಚಳವಳಿ ಹಮ್ಮಿಕೊಂಡಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ರೈತರು ಜೈಲು ಚಳವಳಿ ನಡೆಸುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಪಂ, ತಾಪಂ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಸಿದ್ಧತೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿಗಳನ್ನು ಸಿದ್ಧಪಡಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆದರೆ, ಚುನಾವಣೆ ಕುರಿತು ಇನ್ನೂ ಅಂತಿಮ ಅಧಿಸೂಚನೆ ಪ್ರಕಟವಾಗಿಲ್ಲ. ಅಧಿಸೂಚನೆ ಹೊರಬಂದ ಬಳಿಕ ಚುನಾವಣಾ ಪ್ರಕ್ರಿಯೆ ಮತ್ತು ಮುಂದಿನ ಕಾರ್ಯತಂತ್ರಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು.

ಡಿಸೆಂಬರ್‌ 15ಕ್ಕೆ ಜಿಪಂ, ತಾಪಂ ಚುನಾವಣೆ ಅಧಿಸೂಚನೆ ಸಾಧ್ಯತೆ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಅಧಿಸೂಚನೆ ಡಿಸೆಂಬರ್‌ 15ರಂದು ಪ್ರಕಟವಾಗುವ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್‌ 15ರಂದು ಜಿಪಂ ಮತ್ತು ತಾಪಂ ಚುನಾವಣೆಗಳ ಅಧಿಸೂಚನೆ ಹೊರಬರುವ ಸಾಧ್ಯತೆ ಇರುವುದರಿಂದ, ಚುನಾವಣಾ ಪ್ರಕ್ರಿಯೆಗೆ ತೊಂದರೆಯಾಗದಂತೆ ಚಳಿಗಾಲದ ಅಧಿವೇಶನವನ್ನು ಬೇಗನೆ ನಡೆಸಲು ಉದ್ದೇಶಿಸಲಾಗಿದೆ ಅಷ್ಟೇ ಎಂದರು.

Related Articles

Back to top button