*ಬೆಳಗಾವಿಯಲ್ಲಿ ಅಮಾನವೀಯ ಘಟನೆ*: *ರಸ್ತೆ ಬದಿಯಲ್ಲಿ ಎಸೆದಿದ್ದ ನವಜಾತ ಶಿಶು ನಾಯಿ ಪಾಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾನವೀಯತೆಯನ್ನೇ ಬೆಚ್ಚಿಬೀಳಿಸುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.
ಇನ್ನೂ ಕಣ್ಣು ಬಿಡದ ನವಜಾತ ಶಿಶುವೊಂದನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಹಾಗೂ ನೋವು ಮೂಡಿಸಿದೆ. ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ ಮಗುವಿನ ದೇಹವನ್ನು ಬೀದಿ ನಾಯಿಗಳು ಎಳೆದಾಡಿರುವ ಹೃದಯವಿದ್ರಾವಕ ದೃಶ್ಯ ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಅಥಣಿ ಪಟ್ಟಣದ ಕಾಗವಾಡ ರಸ್ತೆಯ ಪಕ್ಕದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ರಸ್ತೆ ಬದಿಯಲ್ಲಿ ಬೀದಿ ನಾಯಿಗಳು ಯಾವುದೋ ವಸ್ತುವನ್ನು ಎಳೆದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರಿಗೆ ಅನುಮಾನ ಮೂಡಿದೆ. ಕೂಡಲೇ ಹತ್ತಿರ ಹೋಗಿ ಪರಿಶೀಲಿಸಿದಾಗ, ನಾಯಿಗಳು ನವಜಾತ ಶಿಶುವಿನ ದೇಹವನ್ನು ಎಳೆದಾಡುತ್ತಿರುವುದು ಕಂಡುಬಂದಿದೆ. ಮಗುವಿನ ತಲೆ ಹಾಗೂ ಒಂದು ಕಾಲು ಕಾಣಿಸಿಕೊಂಡಿದ್ದು, ದೃಶ್ಯ ಕಂಡ ಸ್ಥಳೀಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ತಕ್ಷಣವೇ ಸ್ಥಳೀಯರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಲಕ್ಕಪ್ಪ ಅಗ್ನಿ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ನವಜಾತ ಶಿಶುವನ್ನು ಯಾರು ರಸ್ತೆ ಬದಿಯಲ್ಲಿ ಬಿಸಾಡಿದ್ದಾರೆ? ಮಗು ಜನಿಸಿದ ಬಳಿಕ ಈ ಕೃತ್ಯ ಎಸಗಲಾಗಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ? ಈ ಘಟನೆ ನಡೆದಿರುವ ಸಮಯ ಯಾವುದು? ಎಂಬ ಹಲವು ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಮಗುವನ್ನು ಈ ಸ್ಥಿತಿಗೆ ತಳ್ಳಿದವರ ಪತ್ತೆಗಾಗಿ ಪೊಲೀಸರು ತನಿಖೆ ನಡೆಸಬೇಕಿದೆ.
ಹೆತ್ತ ಮಗುವನ್ನು ರಕ್ಷಿಸಿ ಪೋಷಿಸಬೇಕಾದವರೇ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ಮಗುವಿನ ಜನನದ ಹಿಂದಿನ ಪರಿಸ್ಥಿತಿ, ಘಟನೆಗೆ ಕಾರಣ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.
ಒಟ್ಟಿನಲ್ಲಿ, ಬದುಕಿನ ಆರಂಭದಲ್ಲೇ ಜಗತ್ತನ್ನು ನೋಡುವ ಅವಕಾಶವನ್ನೂ ಪಡೆಯದ ಹಸುಗೂಸು ಬೀದಿ ನಾಯಿಗಳ ಪಾಲಾಗಿರುವ ಘಟನೆ ನಾಗರಿಕ ಸಮಾಜವನ್ನು ತಲ್ಲಣಗೊಳಿಸಿದೆ. ನವಜಾತ ಶಿಶುವಿನ ಸಾವಿಗೆ ಕಾರಣರಾದವರು ಯಾರೇ ಆಗಿರಲಿ, ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.




