*ಯುಪಿಎಸ್ ಸಿ ನಿಯಮಾವಳಿ ಮತ್ತು ಪ್ರಕ್ರಿಯೆಗಳನ್ನು ಕೆಪಿಎಸ್ ಸಿಯಲ್ಲಿ ಅಳವಡಿಸಿ: ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರ ಮನವಿ*

ಪ್ರಗತಿವಾಹಿನಿ ಸುದ್ದಿ: “ಪಿ.ಸಿ. ಹೋಟಾ ಸಮಿತಿಯ ವರದಿ ಮತ್ತು ಕೇಂದ್ರ ಲೋಕ ಸೇವಾ ಆಯೋಗದ ನಿಯಮಾವಳಿಗಳು, ಪ್ರಕ್ರಿಯೆಗಳನ್ನು ಕೂಡಲೇ ರಾಜ್ಯ ಲೋಕಸೇವಾ ಆಯೋಗ (ಕೆಪಿಎಸ್ ಸಿ)ದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಆಯೋಗಕ್ಕೆ ಸೂಕ್ತ ಕಾಯಕಲ್ಪ ನೀಡಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರ ನಿಯೋಗವು ಬುಧವಾರ ಮನವಿ ಸಲ್ಲಿಸಿತು.
“ಇತ್ತೀಚಿನ ದಿನಗಳಲ್ಲಿ ಕೆಪಿಎಸ್ ಸಿಯಲ್ಲಿ ನಡೆದಿರುವ ಅಕ್ರಮಗಳಿಂದಾಗಿ ಉದ್ಯೋಗಾಕಾಂಕ್ಷಿಗಳು, ಸಾರ್ವಜನಿಕರು, ಲೋಕಸೇವಾ ಆಯೋಗದ ಮೇಲೆ ನಂಬಿಕೆಯನ್ನು ಕಳೆದುಕೊಂಡು ಆಕ್ರೋಶಭರಿತರಾಗಿರುತ್ತಾರೆ. ಸರ್ಕಾರದ ಆಡಳಿತದ ಮೇಲೂ ಕೆಟ್ಟ ಪರಿಣಾಮ ಬೀರಿರುತ್ತದೆ. ಹೀಗಾಗಿ ಸರ್ಕಾರವು ಈ ಕೂಡಲೇ ಸೂಕ್ತ ಕ್ರಮಗಳನ್ನು ಜರುಗಿಸಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.
“ತಪ್ಪಿತಸ್ಥ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಅನರ್ಹಗೊಳಿಸಲು ಸಂವಿಧಾನದ ಅನುಚ್ಛೇದ 317 ರ ಅಡಿಯಲ್ಲಿ ತನಿಖೆಗೆ ಕೂಡಲೇ ರಾಜ್ಯಪಾಲರು ರಾಷ್ಟ್ರಾಧ್ಯಕ್ಷರ ಮೂಲಕ ಸರ್ವೋಚ್ಚ ನ್ಯಾಯಾಲಯಕ್ಕೆ ವಹಿಸಲು ರಾಜ್ಯ ಸರ್ಕಾರ ಕ್ರಮ ಜರುಗಿಸಬೇಕು ಹಾಗೂ ತನಿಖೆಯ ಅವಧಿಯಲ್ಲಿ ಅಧ್ಯಕ್ಷರು ಮತ್ತು ಕಳಂಕಿತ ಸದಸ್ಯರುಗಳನ್ನು ಅಮಾನತ್ತು ಮಾಡಲು ಸರ್ಕಾರ ಕ್ರಮ ವಹಿಸಬೇಕು. ಆಯೋಗದ ತಪ್ಪಿತಸ್ಥ ಪರೀಕ್ಷಾ ನಿಯಂತ್ರಕರನ್ನು ಉದ್ಯೋಗದಿಂದ ಅನರ್ಹಗೊಳಿಸಲು ಮತ್ತು ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಕ್ರಮವಹಿಸಬೇಕು” ಎಂದು ಮನವಿ ಮಾಡಲಾಗಿದೆ.
ಭ್ರಷ್ಟ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ
“ಆಯೋಗದ ಭ್ರಷ್ಟ ಅಧ್ಯಕ್ಷರು ಮತ್ತು ಸದಸ್ಯರು. ಪರೀಕ್ಷಾ ನಿಯಂತ್ರಕರಿಂದ ಇತ್ತೀಚೆಗೆ ನೇಮಕ ಆಗಿರುವ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು. ಆಯೋಗದಲ್ಲಿ ಎಸಗಿರುವ ಭ್ರಷ್ಟಾಚಾರದ ತನಿಖೆಯನ್ನು ಇಡೀ ಆಯೋಗಕ್ಕೆ ವಿಸ್ತ್ರತಗೊಳಿಸಿ ತನಿಖೆ ಕೈಗೊಳ್ಳಬೇಕು. ಅಧ್ಯಕ್ಷರು, ಸದಸ್ಯರು ಮತ್ತು ಪರೀಕ್ಷಾ ನಿಯಂತ್ರಕರು ಇಂತಹ ಭ್ರಷ್ಟಾಚಾರಗಳಿಂದ ಗಳಿಸಿರುವ ಆಸ್ತಿ-ಪಾಸ್ತಿ, ಹಣ-ಒಡವೆಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ಅವರನ್ನು ಶಿಕ್ಷೆಗೆ ಒಳಪಡಿಸಬೇಕು” ಎಂದು ಪತ್ರದಲ್ಲಿ ಕೋರಲಾಗಿದೆ.
“ಆಯೋಗಕ್ಕೆ ನಿಷ್ಟಾವಂತ, ಪ್ರಾಮಾಣಿಕ, ದಕ್ಷ ವ್ಯಕ್ತಿಗಳನ್ನು ಒಳಗೊಂಡ ಸಣ್ಣ ಸಮಿತಿಯನ್ನು ನೇಮಿಸಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರ ಕ್ರಮ ವಹಿಸಬೇಕು. ಅಲ್ಲಿಯವರೆಗೂ ಸರ್ಕಾರ ಯಾವುದೇ ನೇಮಕಾತಿ ಪ್ರಸ್ತಾವನೆಯನ್ನು ಆಯೋಗಕ್ಕೆ ಕಳುಹಿಸಬಾರದು. ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಕ್ಕೆ ನೇಮಕಗೊಳ್ಳುವ ವ್ಯಕ್ತಿಗಳು ನೇಮಕಗೊಂಡಂದಿನಿಂದ ನಿವೃತ್ತಿಗೊಳ್ಳುವವರೆಗಿನ ಅವಧಿಯಲ್ಲಿ ಪ್ರತಿ ವರ್ಷವೂ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಸ್ಥಿರ ಮತ್ತು ಚರಾಸ್ತಿಗಳ ವಿವರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸುವಂತೆ ಕಾನೂನು ರೂಪಿಸಬೇಕು” ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಆಯ್ಕೆಯ ಪ್ರಕ್ರಿಯೆ ಪಾರದರ್ಶಕವಾಗಿರಲು ಮತ್ತು ಪ್ರಾಮಾಣಿಕರನ್ನು ಆಯ್ಕೆ ಮಾಡಲು ಶೋಧನಾ ಸಮಿತಿ ನೇಮಕ ಮಾಡಬೇಕು. ಆ ಸಮಿತಿಯ ಶಿಫಾರಸ್ಸುಗಳ ಮೇಲೆ ಸರ್ಕಾರ ಮತ್ತು ರಾಜ್ಯಪಾಲರು ನೇಮಕ ಮಾಡಬೇಕು. ಆಯೋಗ ನಡೆಸುವ ಸಂದರ್ಶನದ ಪ್ರಕ್ರಿಯೆ ಸಿಸಿಟಿವಿ ಕಣ್ಣಾವಲು ಅಡಿಯಲ್ಲಿ ನಡೆಸಬೇಕು. ಸಂದರ್ಶನದ ಮಾಹಿತಿಯನ್ನು ಕನಿಷ್ಠ 3 ವರ್ಷ ಸಂಗ್ರಹಿಸಿಡಲು ಸರ್ಕಾರ ಕಾನೂನು ರೂಪಿಸಬೇಕು. ಈ ರೀತಿಯ ಕ್ರಮಗಳ ಮೂಲಕ ಉದ್ಯೋಗ ಆಕಾಂಕ್ಷಿಗಳು, ಸಾರ್ವಜನಿಕರು ಆಯೋಗದ ಮೇಲೆ ನಂಬಿಕೆ ಉಂಟು ಮಾಡುವ ಪ್ರಕ್ರಿಯೆ ಆರಂಭಿಸಬೇಕು” ಎಂದು ವಿವರಿಸಲಾಗಿದೆ.
ನಿಯೋಗದಲ್ಲಿ ಮಾಜಿ ಸಂಸದರಾದ ಉಗ್ರಪ್ಪ, ಬಿ ಎಲ್ ಶಂಕರ್, ಎಲ್ ಹನುಮಂತಯ್ಯ, ಚಂದ್ರಪ್ಪ, ಮುದ್ದಹನುಮೇಗೌಡ, ಮಾಜಿ ಸಚಿವರಾದ ಪಿ ಜಿ ಆರ್ ಸಿಂಧ್ಯ, ಹೆಚ್ ಎಂ ರೇವಣ್ಣ, ರಾಣಿ ಸತೀಶ್, ಮಾಜಿ ಸಭಾಪತಿ ವಿ ಆರ್ ಸುದರ್ಶನ್, ಮಾಜಿ ಶಾಸಕರಾದ ಪಿ ಆರ್ ರಮೇಶ್, ಕೊಂಡಜ್ಜಿ ಮೋಹನ್, ಹಿರಿಯ ಸಾಹಿತಿ ಸಿ ಎಸ್ ದ್ವಾರಕನಾಥ್ ಮತ್ತಿತರರು ಇದ್ದರು.




