*ಬೆಳೆಹಾನಿಗೆ ತ್ವರಿತ ಪರಿಹಾರ ಒದಗಿಸಲು ಸಚಿವ ಸತೀಶ್ ಜಾರಕಿಹೊಳಿ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆ, ಕೃಷಿ, ಬೆಳೆ ವಿಮೆ, ನೀರಾವರಿ, ಜಾನುವಾರುಗಳಿಗೆ ಮೇವು ಸಂಗ್ರಹಣೆ ಸಂಬಂಧಿಸಿದಂತೆ ಅಗತ್ಯವಿರುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಮಳೆ ಕೊರತೆಯಿಂದ ಬೆಳೆ ಹಾನಿಯಂತಹ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಅರ್ಹ ರೈತರಿಗೆ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ನಲ್ಲಿ ಬುಧವಾರ (ಸೆ.16) ನಡೆದ 2026-27ನೇ ಸಾಲಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗುವ ಅನುದಾನವನ್ನು ನಿಯಮಾನುಸಾರ ಹಾಗೂ ಅಗತ್ಯವಿರುವ ಪ್ರದೇಶಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡಬೇಕು. ಎಸ್ಸಿಪಿ-ಟಿಎಸ್ಪಿ ಸೇರಿದಂತೆ ವಿವಿಧ ಯೋಜನೆಗಳ ಅನುದಾನ ಸದ್ಬಳಕೆಯಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಜಿಲ್ಲೆಯಲ್ಲಿನ ಆಣೆಕಟ್ಟುಗಳಲ್ಲಿ ಸಂಗ್ರಹವಿರುವ ನೀರನ್ನು ಅಗತ್ಯಗನುಗುಣವಾಗಿ ಬಿಡುಗಡೆ ಮಾಡಬೇಕು. ಈ ಕುರಿತು ಕೃಷಿ, ಕಂದಾಯ, ನೀರಾವರಿ, ತೋಟಗಾರಿಕೆ ಹಾಗೂ ಹೆಸ್ಕಾಂ ಇಲಾಖೆಗಳನ್ನೊಳಗೊಂಡ ತಂಡವನ್ನು ರಚಿಸಿ ಸಮೀಕ್ಷೆ ನಡೆಸಬೇಕು. ಸಮೀಕ್ಷಾ ವರದಿ ಆಧಾರದ ಮೇಲೆ ನೀರಿನ ಅವಶ್ಯಕತೆಯನ್ನು ಗುರುತಿಸಿ, ಅಗತ್ಯವಿರುವ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಇದೇ ಮಾದರಿಯಲ್ಲಿ ಗದಗ, ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿಯೂ ವಿವಿಧ ಇಲಾಖೆಗಳನ್ನೊಳಗೊಂಡ ತಂಡಗಳನ್ನು ರಚಿಸಿ ಸಮೀಕ್ಷೆ ನಡೆಸಿ ವರದಿ ಪಡೆಯುವಂತೆ ಸೂಚಿಸಿದರು.

ವಿವಿಧ ಇಲಾಖೆಗಳ ವತಿಯಿಂದ ಕರೆಯಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವ ಸಂದರ್ಭದಲ್ಲಿ ಜಿಲ್ಲೆಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಇಲಾಖೆಯ ವಸತಿ ನಿಲಯಗಳಿಗೆ ಸಂಬಂಧಿಸಿದಂತೆ ಬಿಡುಗಡೆಯಾಗುವ ಅನುದಾನವನ್ನು ಬಳಸಿಕೊಂಡು ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ವಸತಿ ನಿಲಯ ನಿರ್ಮಾಣಕ್ಕೆ ನಿವೇಶನ ಗುರುತಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಹಾಗೂ ಪರಿಶಿಷ್ಟ ಪಂಗಡಗಳ ಇಲಾಖೆಗಳ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಂಡ ಪ್ರತ್ಯೇಕ ಕೆ.ಡಿ.ಪಿ ಸಭೆಯನ್ನು ಆಯೋಜಿಸುವಂತೆ ಸೂಚಿಸಿದ ಅವರು ಜಿಲ್ಲೆಯಲ್ಲಿ ವಸತಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆಯ ವತಿಯಿಂದ ತಾಲೂಕುಗಳಿಗೆ ನೇರ ಸಂಪರ್ಕ ಕಲ್ಪಿಸುವುದು ಸೇರಿದಂತೆ ವಿವಿಧ ರಸ್ತೆಗಳ ಅಗಲೀಕರಣಕ್ಕೆ ಚಿಂತಿಸಲಾಗುತ್ತಿದ್ದು, ಈ ಕುರಿತು ಅಧಿಕಾರಿಗಳು ವಿಸ್ತ್ರತ ವರದಿ ಸಲ್ಲಿಸುವಂತೆ ಸೂಚಿಸಿದರು.
ಶಿಕ್ಷಕರ ದಿನಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಅತೀ ಕಡಿಮೆ ಸಮಯದಲ್ಲಿ 4634 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿರುವುದು ಶ್ಲಾಘನೀಯವಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹಾಗೂ ಸಿಬ್ಬಂದಿಗಳನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಭಿನಂದಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆ ಕೊರತೆಯಾಗಿದ್ದು, ಬೈಲಹೊಂಗಲ, ಬೆಳಗಾವಿ, ಸವದತ್ತಿ ಹಾಗೂ ಮೂಡಲಗಿ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸತತ ಮೂರು ವಾರಗಳ ಕಾಲ ಶೇ.50ಕ್ಕಿಂತ ಕಡಿಮೆ ಮಳೆಯಾದಲ್ಲಿ, ಅಂತಹ ಪ್ರದೇಶಗಳನ್ನು ಬರಪೀಡಿತವೆಂದು ಘೋಷಿಸುವ ಕುರಿತು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಯರಗಟ್ಟಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳಲ್ಲಿ ಉದ್ದು ಮತ್ತು ಹೆಸರು ಬೆಳೆಗಳಿಗೆ ಉಂಟಾಗಿರುವ ಹಾನಿಯ ಮಾಹಿತಿಯನ್ನು ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಲಾಗುವುದು. ಎನ್ಡಿಆರ್ಎಫ್ ಮಾನದಂಡಗಳ ವ್ಯಾಪ್ತಿಗೆ ಒಳಪಟ್ಟಲ್ಲಿ ರೈತರಿಗೆ ಬೆಳೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಲಾಶಯಗಳ ನೀರಿನ ಮಟ್ಟ ಪರಿಶೀಲನೆ
ಘಟಪ್ರಭಾ, ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ನೀರಿನ ಮಟ್ಟವನ್ನು ನಿರಂತರವಾಗಿ ಪರಿಶೀಲಿಸಲಾಗುತ್ತಿದೆ. ಹಿಡಕಲ್ ಜಲಾಶಯದಲ್ಲಿ ಸದ್ಯ ನೀರಿನ ಮಟ್ಟ ಕಡಿಮೆಯಾಗಿಲ್ಲ. ರೈತರಿಗೆ ನೀರು ಬಿಡುಗಡೆ ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಕೃಷ್ಣಾ ಜಲಾಶಯದಿಂದಲೂ ಯಾವುದೇ ತೊಂದರೆ ಇಲ್ಲ. ಆದರೆ ಮಲಪ್ರಭಾ ಜಲಾಶಯದಿಂದ ಗದಗ, ನವಲಗುಂದ ಹಾಗೂ ಸವದತ್ತಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ನೀರು ಬಿಡುಗಡೆ ಮಾಡುವಲ್ಲಿ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಲಹಾ ಸಮಿತಿ ಸಭೆ ಕರೆದು ನೀರು ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ರೈತರಿಗೆ ಬೆಳೆ ವಿಮೆ ಸೌಲಭ್ಯ
ರೈತರ ಬೆಳೆಗಳಿಗೆ ವಿಮಾ ಯೋಜನೆಯ ಸೌಲಭ್ಯ ದೊರೆಯುವಂತೆ ರಾಷ್ಟ್ರೀಕೃತ ಬ್ಯಾಂಕ್ಗಳು, ಡಿಸಿಸಿ ಬ್ಯಾಂಕ್ಗಳು ಹಾಗೂ ಇತರೆ ಖಾಸಗಿ ಬ್ಯಾಂಕ್ಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಈಗಾಗಲೇ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕುಡಿಯುವ ನೀರು ಪೂರೈಕೆಗೆ ಕ್ರಮ
ಬೆಳಗಾವಿ ನಗರಕ್ಕೆ ರಕಸಕೊಪ್ಪ ಹಾಗೂ ಹಿಡಕಲ್ ಜಲಾಶಯಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಎಲ್&ಟಿ ಸಂಸ್ಥೆಯ ವತಿಯಿಂದ ಕೈಗೆತ್ತಿಕೊಂಡಿರುವ 24ಥ7 ಕುಡಿಯುವ ನೀರು ಪೂರೈಕೆ ಕಾಮಗಾರಿ ಈಗಾಗಲೇ ಮುಕ್ತಾಯದ ಹಂತದಲ್ಲಿದ್ದು, ಸದ್ಯ ನಗರದಲ್ಲಿ ಕುಡಿಯುವ ನೀರಿನ ಯಾವುದೇ ಕೊರತೆ ಇಲ್ಲ ಎಂದು ಅವರು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಮೃತ ನಗರ ಯೋಜನೆ, ನರೇಗಾ ಹಾಗೂ ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಗಳಡಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಸದ್ಯ ಯಾವುದೇ ಅನುದಾನ ಬಾಕಿ ಉಳಿದಿಲ್ಲ. ಅಮೃತ ನಗರ ಯೋಜನೆಯಡಿ ನಗರದ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ 7 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 93 ಕೋಟಿ ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಲಾಗಿದೆ ನಗರ ವ್ಯಾಪ್ತಿಯಲ್ಲಿ ಒಟ್ಟು 8 ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿವೆ. ಕ್ಯಾಲ-ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ನಿರೀಕ್ಷಕರು ಪ್ರತಿದಿನ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಸಹ ಸದ್ಯ ಸಮರ್ಪಕವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಎಂದು ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇರ್, ಎಸ್ಪಿ-ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಪ್ರತಿ ವಾರ್ಡ್ ಸದಸ್ಯರಿಗೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನಿಯಮಬಾಹಿರವಾಗಿ ಹಣ ಹಂಚಿಕೆ ಮಾಡಲಾಗುತ್ತಿದೆ. ಅನುದಾನವನ್ನು ಅಗತ್ಯವಿರುವ ಕಾಲೋನಿಗಳು ಹಾಗೂ ಅರ್ಹ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕು. ಆದರೆ, ಅನುದಾನವನ್ನು ಅಗತ್ಯವಿರುವ ಸ್ಥಳಗಳಲ್ಲಿ ಸಮರ್ಪಕವಾಗಿ ಬಳಸಲಾಗುತ್ತಿಲ್ಲ ಎಂದು ಅವರು ಹೇಳಿದರು.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆದು ಅಗತ್ಯವಿರುವ ಸ್ಥಳಗಳನ್ನು ಗುರುತಿಸಿ ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಸಮರ್ಪಕವಾಗಿ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ವತಿಯಿಂದ ರಸ್ತೆ ದುರಸ್ತಿಗಾಗಿ ಬಿಡುಗಡೆಯಾಗಿರುವ ಅನುದಾನವನ್ನು ಅಗತ್ಯವಿರುವ ಪ್ರದೇಶಗಳಲ್ಲಿ ಮಾತ್ರ ಸಮರ್ಪಕವಾಗಿ ಬಳಸಿಕೊಂಡು ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪ್ರಸಕ್ತ ನವೆಂಬರ್ ತಿಂಗಳ ನಂತರ ನಗರ ಪ್ರದೇಶದಲ್ಲಿ ಎಲ್&ಟಿ ಸಂಸ್ಥೆಗೆ ರಸ್ತೆಗಳಲ್ಲಿ ಗುಂಡಿ ತೋಡಲು ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ, ಸಂಸ್ಥೆಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಎಲ್ಲ ಕಾಮಗಾರಿಗಳನ್ನು ನವೆಂಬರ್ಗೂ ಮುನ್ನವೇ ತ್ವರಿತವಾಗಿ ಪೂರ್ಣಗೊಳಿಸುವಂತೆ ಶಾಸಕ ಆಸಿಫ್ (ರಾಜು) ಸೇರ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಯಾಬಿನ್ ಬೆಳೆ ಸಮೀಕ್ಷೆಗೆ ಸೂಚನೆ
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸೋಯಾಬಿನ್ ಬೆಳೆಯ ಅವಧಿ ಈಗಾಗಲೇ ಮುಕ್ತಾಯದ ಹಂತದಲ್ಲಿರುವುದರಿಂದ ಕೂಡಲೇ ಬೆಳೆ ಸಮೀಕ್ಷೆ ನಡೆಸಬೇಕು. ಸಮೀಕ್ಷೆಯ ಆಧಾರದ ಮೇಲೆ ವಿಮಾ ಪಾವತಿಗೆ ಅಗತ್ಯ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ವಿಶ್ವಾಸ ವೈದ್ಯ ಅವರು ಮಾತನಾಡಿ, ಮಲಪ್ರಭಾ ಅಣಿಕಟ್ಟಿನಿಂದ ಸವದತ್ತಿ ಭಾಗದ ಕೆರೆಗಳನ್ನು ತುಂಬಿಸಲು ಅಗತ್ಯ ಪ್ರಮಾಣದ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಅಲ್ಲದೆ, ಯರಗಟ್ಟಿ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಅಮೃತ್ ಯೋಜನೆಯಡಿ ಹೆಚ್ಚುವರಿ ಅನುದಾನದ ಅಗತ್ಯವಿದ್ದು, ಬಿಡುಗಡೆಗೆ ಮಾಡುವ ಕುರಿತು ಸಭೆಯ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯ ಎಂ. ನಾಗರಾಜು ಅವರು ಮಾತನಾಡಿ, ಜಿಲ್ಲೆಯ ವಿವಿಧ ಅಣೆಕಟ್ಟುಗಳಲ್ಲಿ ಸಂಗ್ರಹವಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಕೆರೆಗಳ ಸಮರ್ಪಕ ನಿರ್ವಹಣೆ ಹಾಗೂ ಸಂರಕ್ಷಣೆಗೆ ಆದ್ಯತೆ ನೀಡಿದಲ್ಲಿ ಮಳೆನೀರಿನ ಸಂಗ್ರಹಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬೆಳಗಾವಿ ನಗರದಲ್ಲಿ ಎಲ್&ಟಿ ಸಂಸ್ಥೆಯ ವತಿಯಿಂದ ಕೈಗೊಳ್ಳಲಾಗುತ್ತಿರುವ ಕುಡಿಯುವ ನೀರಿನ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವ ಕುರಿತು ಸಭೆಯ ಗಮನಕ್ಕೆ ತಂದ ಅವರು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಅವರು ಸರಕಾರಿ ಆಸ್ಪತ್ರೆ, ವಸತಿ ನಿಲಯಗಳ ವಿಷಯಗಳ ಕುರಿತು ಪ್ರಸ್ತಾಪಿಸಿದರು.
ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹಾಗೂ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರುಗಳು ಕುಡಿಯುವ ನೀರು, ಸಮರ್ಪಕ ವಿದ್ಯುತ ಪೂರೈಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯ ಗಮನಕ್ಕೆ ತಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ ಸದ್ಯ ಯಾವುದೇ ಸಮಸ್ಯೆ ಇಲ್ಲ. ನಿಪ್ಪಾಣಿ ಹಾಗೂ ಅಥಣಿ ಭಾಗಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾದಲ್ಲಿ, ಅಂತಹ ಗ್ರಾಮಗಳನ್ನು ಗುರುತಿಸಿ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಭೆಯಲ್ಲಿ ಹೆಸ್ಕಾಂ ಅಧ್ಯಕ್ಷರಾದ ಸಯ್ಯದ ಅಜ್ಜಂಪೀರ ಖಾದ್ರಿ, ಕೆ.ಡಿ.ಪಿ. ನಾಮ ನಿರ್ದೇಶಿತ ಸದಸ್ಯರಾದ ಯಲ್ಲಪ್ಪ ತಲ್ಲೂರ, ಬಸವರಾಜ ಮ್ಯಾಗೋಟಿ, ಬಸಪ್ಪ ಕೋಳಿ, ಪೋಲಿಸ್ ಆಯುಕ್ತ ಪ್ರಕಾಶ ನಿಕ್ಕಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಮರಾಜನ್.ಕೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶ ಮುರಗೋಡ, ಜಿಲ್ಲಾ ಆರೋಗ್ಯಾಧಿಕಾರಿ ಈಶ್ವರ ಗಡಾದ, ಆಹಾರ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ನಾಯಕ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

