Belagavi NewsBelgaum NewsKannada NewsKarnataka News

*ಲಿಂಗಾಯತ ತತ್ವಗಳ ತಿಳುವಳಿಕೆ ಮತ್ತು ಆಚರಣೆ ಮೂಲ ಉದ್ದೇಶವಾಗಬೇಕು: ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಲಿಂಗಾಯತ ಧರ್ಮದ ತತ್ವಗಳನ್ನು ಸರ್ವಸಾಮಾನ್ಯರಿಗೆ ತಿಳಿಸುವುದು ಮತ್ತು ಲಿಂಗಾಯಿತ ತತ್ವಗಳ ಆಚರಣೆಯ ಮೂಲಕ ಮಾತ್ರ ಧರ್ಮದ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹೇಳಿದರು.

ಅವರಿಂದು ಬೆಳಗಾವಿಯ ಎಸ್ ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಗ್ರಹದಲ್ಲಿ ಆರಂಭವಾದ ಎರಡು ದಿನಗಳ ಜಾಗತಿಕ ಲಿಂಗಾಯಿತ ಮಹಾಸಭೆಯ ವಾರ್ಷಿಕ ಸರ್ವಸಾಮಾನ್ಯ ಸಭೆ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. 

Home add -Advt

ಲಿಂಗಧಾರಣೆ, ರುದ್ರಾಕ್ಷಿ ಧಾರಣೆ, ಲಿಂಗಪೂಜೆ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಆಚರಣೆಯಲ್ಲಿ ತರುವ ಮೂಲಕ ಮತ್ತು ಲಿಂಗಾಯತ ತತ್ವಗಳ ಪರಿಣಾಮಕಾರಿ ಪ್ರಚಾರದ ಮೂಲಕ ಮಾತ್ರ ಲಿಂಗಾಯತ ಸ್ವತಂತ್ರ ಧರ್ಮದ ವಿರೋಧ ಮಾಡುವವರ ಮನ ಪರಿವರ್ತನೆ ಮತ್ತು ವಿರೋಧವನ್ನು ಕಡಿಮೆ ಮಾಡಲು ಸಾಧ್ಯ ಎಂದವರು ಪ್ರತಿಪಾದಿಸಿದರು. 

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಜಾಗತಿಕ ಲಿಂಗಾಯಿತ ಮಹಾಸಭೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಅವರು ಅಂತರಾಷ್ಟ್ರೀಯ ಬಸವ ಕೇಂದ್ರ ಕಟ್ಟಡ ಸಿದ್ಧವಾಗಿ 22 ವರ್ಷಗಳಾಯಿತು ಅಲ್ಲಿ ಯಾವುದೇ ಬಸವಪರ ಚಟುವಟಿಗಳು ನಡೆಯುತ್ತಿಲ್ಲ ಎಂದು ವಿಷಾದಿಸಿದರು. ಅದೇ ರೀತಿ ಸಿದ್ದರಾಮಯ್ಯನವರ ಕಾಲದಲ್ಲಿ 560 ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾದ ಅನುಭವ ಮಂಟಪ ಬೃಹತ್ ಕಟ್ಟಡದ ಕಾರ್ಯ ಇನ್ನೊಂದು ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ, ನಂತರ ಮುಂದೇನು ಅಲ್ಲಿ ಯಾವ ರೀತಿಯ ಚಟುವಟಿಕೆಗಳು ಕೈಗೊಳ್ಳುವಂತಾಗಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿದೆ ಈ ಕುರಿತು ಎರಡು ದಿನಗಳ ಸಭೆಯಲ್ಲಿ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದರು. 

900 ವರ್ಷಗಳ ಹಿಂದೆ ಸ್ಥಾಪಿತವಾಗಿದ್ದ ಅನುಭವ ಮಂಟಪದ ಉದ್ದೇಶ ಏನಿತ್ತು ಮತ್ತು ಈಗ ಬದಲಾದ ವಾತಾವರಣದ ಹಿನ್ನೆಲೆಯಲ್ಲಿ ಅನುಭವ ಮಂಟಪದಲ್ಲಿ ಯಾವ ಕಾರ್ಯಕ್ರಮಗಳು ಯಾವ ಮಾದರಿಯ ಚಟುವಟಿಕೆಗಳು ನಡೆಯಬೇಕು ಪ್ರಸ್ತುತ ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬುದನ್ನು ಸಭೆ ನಿರ್ಧರಿಸಬೇಕಿದೆ ಎಂದರು. 

ಲಿಂಗಾಯತ ಧರ್ಮದ ಬೇಡಿಕೆಗಾಗಿ ನಡೆದ ಕಾರ್ಯಕ್ರಮಗಳ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸ್ವಾಮೀಜಿಗಳ ವಿರುದ್ಧ ಹಲವಾರು ಸ್ವಾಮೀಜಿಗಳೇ ಅವಾಚ್ಯ ಶಬ್ದಗಳಲ್ಲಿ ಟೀಕಿಸಿದ್ದು ಮತ್ತು ಲಿಂಗಾಯಿತರ ವಿರುದ್ಧ ಚಟುವಟಿಕೆಗಳಿಗಾಗಿ ಲಿಂಗಾಯಿತರನ್ನು ಬೆಳೆಸಿಕೊಳ್ಳುವನ್ನು ಪ್ರಸ್ತಾಪಿಸಿದ ಡಾ. ಜಾಮದಾರ ಅವರು ಅದಕ್ಕೆಲ್ಲ ದಾಖಲೆಗಳ ಸಮೇತ ಉತ್ತರವನ್ನು ನೀಡಲಾಗಿದೆ ಇಂಥದಕ್ಕೆಲ್ಲ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದರು. 

ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಉಪಾಧ್ಯಕ್ಷ ಎನ್ ಎಸ್ ಕೆಂಪೇಗೌಡರ ವಹಿಸಿದ್ದರು. ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. 

ಉಪಾಧ್ಯಕ್ಷ ಮುರುಗೇಶ್ ಶಿವಪೂಜಿ ವಂದಿಸಿದರು. ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ ನಿರ್ವಹಿಸಿದರು. ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಗೊಂಗಡ ಶೆಟ್ಟರ್, ಮಹದೇವಪ್ಪ, ನಿವೃತ್ತ ಐಎಎಸ್ ಅಧಿಕಾರಿ ಜಿ.ವಿ.ಕೊಂಗವಾಡ ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳಾದ ಬಸವರಾಜ್ ಧನ್ನೂರ್, ಜಿ ಬಿ ಹಲ್ಯಾಳ, ಪರಮೇಶ್ವರಪ್ಪ ಕಾಗಿನೆಲೆ , ಸವಿತಾ ನಡಕಟ್ಟಿ, ಪ್ರಭಣ್ಣ ನಡಕಟ್ಟಿ, ರಾಜಶೇಖರ್ ತಂಬಾಕೆ, ಬಸವರಾಜ್ ಕಣಜೆ, ಗವಿ ಸಿದ್ದಪ್ಪ, ಜಿಲ್ಲಾ ಪದಾಧಿಕಾರಿಗಳಾದ ಮುರಿಗೆಪ್ಪ ಬಾಳಿ, ಸಿಎಂ ಬೂದಿಹಾಳ, ಎಸ್ ಜಿ ಸಿದ್ನಾಳ, ಪ್ರವೀಣ್ ಚಿಕ್ಕಲಿ, ಚಿನುಗುಡಿ, ಎಫ್ ಆರ್ ಪಾಟೀಲ್ ಉಪಸ್ಥಿತರಿದ್ದರು. ಜಾಗತಿಕ ಲಿಂಗಾಯಿತ ಮಹಾಸಭೆಯ ಮಹಿಳಾ ಪದಾಧಿಕಾರಿಗಳಾದ ರತ್ನಾ ಬೆಣಚಿನಮರಡಿ, ಕಾವೇರಿ ಕಿಲಾರಿ, ಶೋಭಾ ಶಿವಳ್ಳಿ, ಅನಸೂಯ ಬಶೆಟ್ಟಿ ಇವರುಗಳಿಂದ ವಚನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಆರಂಭದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಜಗದ್ಗುರು ಬಸವಣ್ಣನವರ ಪುತ್ತಳಿಗೆ ಪುಷ್ಪಾರ್ಚನೆ ನೆರವೇರಿತು. 

ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭೆಯಿಂದ ಪ್ರಕಟವಾದ “ಅನುಭವ ಮಂಟಪ ಮುಂದೇನು?”ಮತ್ತು “ಲಿಂಗಾಯತ ಧರ್ಮದ ಆಚರಣೆಗಳು” ಹಾಗೂ ಮರಾಠಿ ಭಾಷೆಯ”ಲಿಂಗಾಯತ್ ಸ್ವತಂತ್ರ ಧರ್ಮಚ್” ಎಂಬ ಮೂರು ಗ್ರಂಥಗಳು ಬಿಡುಗಡೆಗೊಂಡವು. ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ನೂರಾರು ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Related Articles

Back to top button