*ಅನುಭವ ಮಂಟಪದ ನಿರ್ವಹಣೆಯನ್ನು ಜೆಎಲ್ಎಂ ಗೆ ನೀಡಲು ಸರ್ಕಾರಕ್ಕೆ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪದ ಸಂಪೂರ್ಣ ನಿರ್ವಹಣೆಯನ್ನು ಜಾಗತೀಕ ಲಿಂಗಾಯತ ಮಹಾ ಸಭೆಗೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಾಗತಿಕ ಲಿಂಗಾಯತ ಮಹಾಸಭೆಯು ಮಹತ್ವದ ನಿರ್ಣಯವನ್ನು ಕೈಗೊಂಡಿತು.
ಬೆಳಗಾವಿಯಲ್ಲಿಂದು ಮುಕ್ತಾಯಗೊಂಡ ಎರಡು ದಿನಗಳ ವಾರ್ಷಿಕ ಸರ್ವಸಾಮಾನ್ಯ ಸಭೆ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಈ ನಿರ್ಣಯವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು.
ಸಿದ್ದರಾಮಯ್ಯನವರ ಕಾಲದಲ್ಲಿ ಆರಂಭವಾದ ಅನುಭವ ಮಂಟಪದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗಾಗಲೇ 400 ಕೋಟಿ ರೂಪಾಯಿಗಳ ಖರ್ಚಾಗಿದೆ ಕಟ್ಟಡ ಮುಕ್ತಾಯಗೊಳ್ಳಲು ಇನ್ನೂ ಕನಿಷ್ಠ 450 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮುಂಬರುವ ಮಾರ್ಚ್ ಅಂತ್ಯದಲ್ಲಿ ಕಟ್ಟಡ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ ಆದರೂ ಅದಕ್ಕೆ ಅಗತ್ಯವಿರುವ ಹಣವನ್ನು ಪ್ರಸ್ತುತ ಮುಂಗಡಪತ್ರದಲ್ಲಿ ನೀಡಲಾಗಿಲ್ಲ ಹೀಗಿದ್ದಾಗ ಮಾರ್ಚ್ ಅಂತ್ಯಕ್ಕೆ ಕಟ್ಟಡ ಪೂರ್ಣಗೊಳ್ಳುವುದು ಅಸಾಧ್ಯದ ಮಾತು. ಕಟ್ಟಡವನ್ನು ಅರ್ಧಮರ್ಧ ಸ್ಥಿತಿಯಲ್ಲಿ ಉದ್ಘಾಟನೆ ಮಾಡಲು ಅವಕಾಶ ನೀಡಬಾರದು ಎಂದು ಸಭೆಯು ನಿರ್ಣಯ ಕೈಗೊಂಡಿತು.
ಕಟ್ಟಡ ಪೂರ್ಣಗೊಂಡ ನಂತರ ಅದರ ಸಂಪೂರ್ಣ ನಿರ್ವಹಣೆ ಅಂದರೆ ಅನುಭವ ಮಂಟಪದಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು ಅಲ್ಲಿ ಏನು ಇರಬೇಕು ಮತ್ತು ಏನು ಇರಬಾರದು ಎಂಬುದರ ನಿರ್ಧಾರವನ್ನು ಜಾಗತೀಕ ಲಿಂಗಾಯತ ಮಹಾಸಭೆ ಗೆ ಬಿಡಬೇಕು ಎನ್ನುವ ಕುರಿತು ಸರ್ಕಾರಕ್ಕೆ ಮನವಿ ಒಂದನ್ನು ಇದೇ ಡಿಸೆಂಬರ್ ಅಂತ್ಯದೊಳಗಾಗಿ ಸಲ್ಲಿಸಲು ಸಭೆ ನಿರ್ಧರಿಸಿತು.
ಇದಕ್ಕೂ ಮುನ್ನ ಜಾಗತೀಕ ಲಿಂಗಾಯತ ಮಹಾಸಭೆ, ಬಸವ ಪರ ಮಠಾಧಿಪತಿಗಳ ಒಕ್ಕೂಟ, ಬಸವ ಪರವಾಗಿರುವ ಎಲ್ಲ ಸಂಘಟನೆಗಳ ಪದಾಧಿಕಾರಿಗಳ ಬೃಹತ್ ಸಭೆಯೊಂದನ್ನು ನಡೆಸಿ ಅನುಭವ ಮಂಟಪ ನಿರ್ಮಾಣವಾದ ನಂತರ ಮುಂದೇನು ಎಂಬ ಅತ್ಯಂತ ಗಂಭೀರ ಮತ್ತು ಮಹತ್ವದ ಕುರಿತು ವಿಸ್ತೃತವಾದ ಚರ್ಚೆಯನ್ನು ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲು ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಮಂಡಿಸಿದ ವಿಚಾರಗಳ ಅನ್ವಯ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂಬಂಧ ಬಸವ ಪರ ಮಠಾಧೀಶರನ್ನು ಭೇಟಿ ಮಾಡುವುದು, ಬಸವಪರ ಸಂಘಟನೆಗಳನ್ನು ಸಂಪರ್ಕಿಸಿ ಸಭೆಯ ಆಯೋಜನೆ ಕುರಿತು ರಾಷ್ಟ್ರೀಯ ಉಪಾಧ್ಯಕ್ಷ ಬೀದರ್ ಜಿಲ್ಲೆಯ ಬಸವರಾಜ ಧನ್ನೂರ್ ಅವರಿಗೆ ಜವಾಬ್ದಾರಿಯನ್ನು ನೀಡಲಾಯಿತು.
ಈ ಕುರಿತು ಮಾತನಾಡಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಮಾದಾರ ಅನುಭವ ಮಂಟಪವು ಅಂದು ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನುಭವಿಗಳು ಮತ್ತು ಅನುಭಾವಿಗಳಿಂದ ಸ್ಥಾಪನೆಗೊಂಡು ಅಲ್ಲಿ ಮೌಲಿಕವಾದ ಚರ್ಚೆಗಳು ನಡೆಯುತ್ತಿದ್ದವು ಈಗಲೂ ಅದೇ ಮಾದರಿಯಲ್ಲಿ ಅದರ ಪಾವಿತ್ರ್ಯತೆ ಮತ್ತು ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಡೆಯುವಂತಾಗಬೇಕು ಎಂದರು.
ಸಿಖ್ ಧರ್ಮ ಕ್ಷೇತ್ರವಾದ ಅಮೃತ ಸರ್ ಸ್ವರ್ಣ ಮಂದಿರದಲ್ಲಿ ಯಾವ ರೀತಿ ನಿರಂತರ ಚಟುವಟಿಕೆಗಳು ನಡೆಯುತ್ತವೆಯೋ ಆ ಮಾದರಿಯಲ್ಲಿ ಅನುಭವ ಮಂಟಪದಲ್ಲಿಯೂ ನಡೆಯಬೇಕು, ಅದರ ಅಧ್ಯಯನಕ್ಕೆಂದೆ ಜಾಗತಿಕ ಲಿಂಗಾಯಿತ ಮಹಾಸಭೆಯ ಎಲ್ಲ ಜಿಲ್ಲಾಧ್ಯಕ್ಷರುಗಳ ಮತ್ತು ಪದಾಧಿಕಾರಿಗಳ “ಸುವರ್ಣ ಮಂದಿರ ಭೇಟಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಮತ್ತು ಅನುಭವ ಮಂಟಪ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಲು ತೀರ್ಮಾನಿಸಲಾಗಿದೆ ಎಂದವರು ಹೇಳಿದರು.
ಅಧ್ಯಕ್ಷತೆಯನ್ನು ಎನ್. ಎಸ್. ಕೆಂಪಗೌಡರ್ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಎಂ ವಿ ಗೊಂಗಡಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿದರು. ಕುಷ್ಟಗಿಯ ಮಾಜಿ ಶಾಸಕ ಶರಣಪ್ಪನವರ್, ಪರಮೇಶ್ವರಪ್ಪ ಕಾಗಿನೆಲೆ, ಎಂ. ಮಹಾದೇವಪ್ಪ, ಬಸವರಾಜ್ ಹರ್ನಾಳ್, ಎಂ. ಶಿವಕುಮಾರ್ ವೇದಿಕೆ ಮೇಲೆ ಉಪಸ್ಥಿತರಿದ್ದ ಪ್ರಮುಖರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ, ರಾಜ್ಯಗಳ ಅಧ್ಯಕ್ಷರುಗಳು, ರಾಷ್ಟ್ರೀಯ ಮತ್ತು ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.




