Kannada NewsKarnataka NewsLatestPolitics

*ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ: ಸಿಎಂ ಡಿ ಕೆ ಶಿವಕುಮಾರ್*

ದೇಶದ ಪ್ರಗತಿಗೆ ದಕ್ಷಿಣ ಭಾರತ ಕೊಡುಗೆ ಬಹುಪಾಲು

ಪ್ರಗತಿವಾಹಿನಿ ಸುದ್ದಿ: “ಹೊಸ ಆಲೋಚನೆಗಳು ರೂಪ ಪಡೆದಾಗ ನಗರಗಳು ಅಭಿವೃದ್ಧಿ ಹೊಂದಲಿವೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

Home add -Advt

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಭಾನುವಾರ ನಡೆದ ವಿಸ್ಟಾ ಸ್ಪೇಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಉಪಸ್ಥಿತರಿದ್ದರು.

“ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಕುಟುಂಬ ಸಮೇತರಾಗಿ ಆಗಮಿಸಿ ಹೊಸ ಪೀಳಿಗೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ದೂರದೃಷ್ಟಿಯಿಂದ ಹೈದರಾಬಾದ್ ಇಷ್ಟು ದೊಡ್ಡದಾಗಿ ಬೆಳವಣಿಗೆ ಕಂಡಿದೆ. ನಾವು ಇತಿಹಾಸ ಮರೆಯಬಾರದು, ಮರೆತರೆ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಬೆಂಗಳೂರಿನ ಹವಾಮಾನ, ಸಂಸ್ಕೃತಿ ಈ ನಗರದ ಬಲ. ವಿಸ್ಟಾ ಸ್ಪೇಸ್ ಹೊಸ ಅನ್ವೇಷಣೆ ಮೂಲಕ ಬೆಂಗಳೂರಿಗೆ ಅಮೂಲ್ಯ ಕೊಡುಗೆ ನೀಡುತ್ತಿದೆ. ಈ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ವಾಸ್ತುಶಿಲ್ಪ ಹಾಗೂ ದೂರದೃಷ್ಟಿ ಸಮ್ಮಿಲನವನ್ನು ನಾವು ನೋಡುತ್ತಿದ್ದೇವೆ. ಇಡೀ ವಿಶ್ವ ಬೆಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್ ಹಾಗೂ ಅಮರಾವತಿ ಸೇರಿ ದಕ್ಷಿಣ ಭಾರತವನ್ನು ಎದುರು ನೋಡುತ್ತಿದೆ. ನಾವು (ದಕ್ಷಿಣ ಭಾರತ) ಪ್ರತಿ ವರ್ಷ 4 ಲಕ್ಷ ಇಂಜಿನಿಯರ್ ಗಳನ್ನು ತಯಾರು ಮಾಡುತ್ತಿದ್ದೇವೆ” ಎಂದರು.

“ಬೆಂಗಳೂರಿನಲ್ಲಿ ಕಳೆದ 25 ವರ್ಷಗಳಲ್ಲಿ ಜನಸಂಖ್ಯೆ 70 ಲಕ್ಷದಿಂದ 1.40 ಕೋಟಿಗೆ ಏರಿಕೆಯಾಗಿದೆ. 1.31 ಕೋಟಿ ವಾಹನಗಳಿವೆ. ಬೆಂಗಳೂರು ಸುಂದರ ನಗರವಾದರೂ ಯೋಜಿತ ನಗರವಲ್ಲ. ದೇಶದ ಬೇರೆ ನಗರಗಳಲ್ಲಿ ರಸ್ತೆ ಪ್ರಮಾಣ 18-20% ಇದ್ದರೆ, ಬೆಂಗಳೂರಿನಲ್ಲಿ 8% ಮಾತ್ರ ಇದೆ. ಹೊಸ ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಪ್ರದೇಶಗಳ ಭೂಸ್ವಾಧೀನ ದೊಡ್ಡ ಸವಾಲಾಗಿದೆ” ಎಂದರು.

“ಚಂದ್ರಬಾಬು ನಾಯ್ಡು ಅವರು ಹಂಚಿಕೆ ಆಧಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮಾಡುತ್ತಿದ್ದಾರೆ. ನಾವು ಇದೆ ಪರಿಕಲ್ಪನೆಯನ್ನು ಅನುಸರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಭೂ ಮಾಲೀಕರು ಇದರ ಬಗ್ಗೆ ಆಸಕ್ತಿ ವಹಿಸುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ 26 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ನಾನು ದಾವೋಸ್ ಆರ್ಥಿಕ ಸಮ್ಮೇಳನದಲ್ಲಿ ಉದ್ಯಮಿಗಳ ಜೊತೆ ನಾನು ಒಪ್ಪಂದಕ್ಕೆ ಸಹಿ ಹಾಕಲಿಲ್ಲ. ಆಗ ಬೇರೆ ರಾಜ್ಯದವರು ಕೇಳಿದರು. ನಾನು ಹೂಡಿಕೆ ಒಪ್ಪಂದಗಳಿಗೆ ನಮ್ಮ ರಾಜ್ಯದಲ್ಲೇ ಸಹಿ ಹಾಕಲು ಬಯಸುವೆ ಎಂದು ಹೇಳಿದೆ” ಎಂದರು.

“ಮಹಾರಾಷ್ಟ್ರ ಸಿಎಂ ನೀವು ಮಹಾರಾಷ್ಟ್ರದಲ್ಲಿ ಹೂಡಿಕೆಗೆ ಯಾಕೆ ಮುಂದಾಗುತ್ತಿಲ್ಲ ಎಂದು ಕೇಳಿದರು. ಆಗ ಹೂಡಿಕೆದಾರರು ಬೆಂಗಳೂರಿನಲ್ಲಿ ನಮಗೆ ಕಚೇರಿ ಜಾಗ 1 ಡಾಲರ್ ಗೆ ಸಿಕ್ಕರೆ, ಮಹಾರಾಷ್ಟ್ರದಲ್ಲಿ 3.5 ಡಾಲರ್ ವೆಚ್ಚ ಮಾಡಬೇಕು. ಬೆಂಗಳೂರಿನಲ್ಲಿ ಒಂದೂವರೇ ಕೋಟಿಗೆ ಅಪಾರ್ಟ್ ಮೆಂಟ್ ಮನೆ ಸಿಗುತ್ತದೆ. ಮುಂಬೈನಲ್ಲಿ 20 ಕೋಟಿ ಬೇಕಾಗುತ್ತದೆ ಎಂದು ವಿವರಿಸಿದರು. ಹೀಗಾಗಿ ಮಹಾರಾಷ್ಟ್ರ ಸಿಎಂ 80 ಸಾವಿರ ಎಕರೆ ಪ್ರದೇಶದಲ್ಲಿ ಹೊಸ ನಗರ ನಿರ್ಮಿಸುತ್ತಿದ್ದಾರೆ” ಎಂದು ವಿವರಿಸಿದರು.

“ದಕ್ಷಿಣ ಭಾರತ ಪ್ರತಿಭಾನ್ವಿತ ಕೇಂದ್ರವಾಗಿದೆ. ನಾವು ನಗರಗಳನ್ನು ಬೆಳಗಾಗುವುದರಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಅದಕ್ಕೆ ಸಮಯ ಬೇಕಾಗುತ್ತದೆ. ಚಂದ್ರಬಾಬು ನಾಯ್ಡು ಅವರು ದೊಡ್ಡ ತೀರ್ಮಾನ ಮಾಡಿ ಹೊಸ ನಗರ ನಿರ್ಮಿಸಲು ಮುಂದಾಗಿದ್ದಾರೆ. ನಾನು ಇಂಧನ ಸಚಿವನ್ನಾಗಿದ್ದಾಗ 15 ಸಾವಿರ ಎಕರೆ ಪ್ರದೇಶದಲ್ಲಿ ಒಂದು ಎಕರೆಯನ್ನು ಸ್ವಾಧೀನಪಡಿಸಿಕೊಳ್ಳದೆ, ಸೋಲಾರ್ ಪಾರ್ಕ್ ನಿರ್ಮಿಸಿದೆ. ಆಗಿನ ಸಮಯದಲ್ಲಿ ಏಷ್ಯಾದ ಅತಿ ದೊಡ್ಡ ಸೋಲಾರ್ ಪಾರ್ಕ್ ಆಗಿತ್ತು. ನಮ್ಮ ಯೋಜನೆಯನ್ನು ಕೇಂದ್ರ ಸರ್ಕಾರ ಕುಸುಮ್ ಯೋಜನೆ ತಂದಿದೆ” ಎಂದು ತಿಳಿಸಿದರು.

ದೇಶದ ಪ್ರಗತಿಗೆ ದಕ್ಷಿಣ ಭಾರತ ಕೊಡುಗೆ ಬಹುಪಾಲು

“ಬೆಂಗಳೂರಿನಲ್ಲಿ ಮಹಾರಾಜರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಿದ ಕಾರಣ ನೆಹರೂ ಅವರ ಕಾಲದಲ್ಲಿ ಅನೇಕ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾದವು. ದಕ್ಷಿಣ ಭಾರತ ದೇಶದ ಪ್ರಗತಿಗೆ ಬಹುಪಾಲು ಕೊಡುಗೆ ನೀಡುತ್ತಿದೆ. ನಮ್ಮ ಸರ್ಕಾರ ಯುವ ಉದ್ಯಮಿಗಳ ಬೆನ್ನಿಗೆ ನಿಲ್ಲಲಿದೆ. ಜತೆಗೂಡುವುದು ಆರಂಭ, ಜತೆಗೂಡಿ ಆಲೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ನಮ್ಮ ನಗರ, ರಾಜ್ಯ ಹಾಗೂ ದೇಶದ ಪ್ರಗತಿಗೆ ನಾವು ಜತೆಯಾಗೋಣ” ಎಂದು ಕರೆ ನೀಡಿದರು.

Related Articles

Back to top button