Kannada NewsKarnataka NewsLatest

*BREAKING: ರಾಜ್ಯದ 8 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ*

ಪ್ರಗತಿವಾಹಿನಿ ಸುದ್ದಿ: ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ 8 ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರು, ಬಳ್ಳಾರಿ, ಮಂಡ್ಯ, ಮಡಿಕೇರಿ, ಹುಬ್ಬಳ್ಳಿ, ಕಲಬುರಗಿ, ಬೀದರ್ ಹಾಗೂ ಚಿಕ್ಕಬಳ್ಳಾಪುರದ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು ಈ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿದೆ. ಮನೆಯಲ್ಲಿದ್ದ ಬಂಗಾರದ ನಿಖರ ತೂಕ ಹಾಗೂ ಮೌಲ್ಯ ಮಾಪನ ಮಾಡಲು ಲೋಕಾಯುಕ್ತ ಸಿಬ್ಬಂದಿ ಅಕ್ಕಸಾಲಿಗನನ್ನು ಸ್ಥಳಕ್ಕೆ ಕರೆತಂದಿದ್ದು, ಅಧಿಕಾರಿಗಳು ಸಂಪೂರ್ಣ ಆಸ್ತಿ ವಿವರ ಕಲೆಹಾಕುತ್ತಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರ ನೇತೃತ್ವದಲ್ಲಿ ಬಸವನಗುಡಿಯ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಶ್ರೀದೇವಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಭರ್ಜರಿ ದಾಳಿ ನಡೆಸಲಾಗಿದೆ. ಬಸವನಗುಡಿ ಕಚೇರಿ ಹಾಗೂ ಈ ಹಿಂದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ರಾಮನಗರದ ಕಚೇರಿಗಳ ಮೇಲೆಯೂ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗದ ಎಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಮಡಿಕೇರಿ ನಗರಸಭೆ ಆಯುಕ್ತ ರಮೇಶ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಇನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ವಿನಾಯಕ ಬಡಾವಣೆಯಲ್ಲಿರುವ ನಿವೃತ್ತ ಅಧಿಕಾರಿ ಶಿವರಾಜ್ ಅವರ ಮನೆ ಹಾಗೂ ಅವಸರಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Related Articles

Back to top button