Film & EntertainmentKannada NewsKarnataka NewsLatest

*KVN ಪ್ರೊಡಕ್ಷನ್ಸ್ ವಿರುದ್ಧ ಕೋಟ್ಯಂತರ ರೂಪಾಯಿ ವಂಚನೆ ಆರೋಪ: ನಿರ್ಮಾಪಕರ ಸಂಘಕ್ಕೆ ದೂರು*

ಪ್ರಗತಿವಾಹಿನಿ ಸುದ್ದಿ: ‘ಟಾಕ್ಸಿಕ್’, ‘ಜನ ನಾಯಗನ್’ ಸೇರಿದಂತೆ ಹಲವು ದೊಡ್ಡ ಸಿನಿಮಾಗಳ ನಿರ್ಮಾಣ ಹಾಗೂ ವಿತರಣೆಯಲ್ಲಿ ತೊಡಗಿಸಿಕೊಂಡಿರುವ KVN ಪ್ರೊಡಕ್ಷನ್ಸ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ‘ಬಲರಾಮನ ದಿನಗಳು’ ಚಿತ್ರದ ವಿತರಣಾ ವ್ಯವಹಾರದಲ್ಲಿ ತಮಗೆ ಹಣ ಪಾವತಿಸದೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಪದ್ಮಾವತಿ ಫಿಲಮ್ಸ್ ನಿರ್ಮಾಪಕರು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾರೆ.

ತಮಗಾಗಿರುವ ನಷ್ಟಕ್ಕೆ KVN ಪ್ರೊಡಕ್ಷನ್ಸ್ ಕಡೆಯಿಂದ ₹2 ಕೋಟಿ ಪರಿಹಾರ ಕೊಡಿಸಬೇಕು ಹಾಗೂ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಪದ್ಮಾವತಿ ಫಿಲಮ್ಸ್ ದೂರಿನಲ್ಲಿ ಮನವಿ ಮಾಡಿದೆ.

ಪದ್ಮಾವತಿ ಫಿಲಮ್ಸ್ ನಿರ್ಮಾಣದ ‘ಬಲರಾಮನ ದಿನಗಳು’ ಸಿನಿಮಾವನ್ನು KVN ಪ್ರೊಡಕ್ಷನ್ಸ್ ವಿತರಣೆ ಮಾಡಿತ್ತು. ಆದರೆ ಚಿತ್ರದ ವಿತರಣೆಯ ಬಳಿಕ ಬಂದ ಲಾಭದ ಹಣವನ್ನು ನಿರ್ಮಾಪಕರಿಗೆ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ದೂರಿನ ಪ್ರಕಾರ, KVN ಸಂಸ್ಥೆಯವರಾಗಿ ಪರಿಚಯಿಸಿಕೊಂಡ ಸುಪ್ರೀತ್ ಎಂಬುವರು ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಆದರೆ ಹಕ್ಕು ಖರೀದಿಸುವ ಸಂದರ್ಭದಲ್ಲಿ ನಿರ್ಮಾಪಕರಿಗೆ ಯಾವುದೇ ಹಣ ಪಾವತಿಸಿರಲಿಲ್ಲ ಎಂದು ಪದ್ಮಾವತಿ ಫಿಲಮ್ಸ್ ಆರೋಪಿಸಿದೆ.

ಬಳಿಕ ಚಿತ್ರದ ಲೆಕ್ಕಾಚಾರದ ಬಗ್ಗೆ ವಿಚಾರಿಸಿದಾಗ, ₹43 ಸಾವಿರಕ್ಕೂ ಹೆಚ್ಚಿನ ಗಳಿಕೆ ಬಂದ ನಂತರವಷ್ಟೇ ಚಿತ್ರಮಂದಿರಗಳಿಂದ ಹಣ ಪಾವತಿಯಾಗುತ್ತದೆ ಎಂದು ತಿಳಿಸಲಾಗಿತ್ತು ಎನ್ನಲಾಗಿದೆ. ಆದರೆ ನಿರ್ಮಾಪಕರ ಕಡೆಯಿಂದ ಚಿತ್ರಮಂದಿರಗಳನ್ನು ವಿಚಾರಿಸಿದಾಗ, ಚಿತ್ರಮಂದಿರದವರು ಶೇ.50ರಷ್ಟು ಪಾಲನ್ನು ನೀಡಿರುವುದಾಗಿ ತಿಳಿಸಿದ್ದರು. ಈ ಹಣವೂ ತಮ್ಮ ಕೈ ಸೇರಿಲ್ಲ ಎಂದು ನಿರ್ಮಾಪಕರು ದೂರಿನಲ್ಲಿ ತಿಳಿಸಿದ್ದಾರೆ.

ಇದರ ಜೊತೆಗೆ ವಿತರಣಾ ಹಕ್ಕು ಪಡೆಯುವ ಸಂದರ್ಭದಲ್ಲಿ ಚಿತ್ರದ OTT ಹಾಗೂ ಟಿವಿ ಸ್ಯಾಟಲೈಟ್ ಹಕ್ಕುಗಳನ್ನು ಮಾಡಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಆ ಭರವಸೆಯಂತೆ ಯಾವುದೇ ಕಾರ್ಯ ನಡೆದಿಲ್ಲ ಹಾಗೂ ಬರಬೇಕಾದ ಹಣವನ್ನೂ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ.

‘ಬಲರಾಮನ ದಿನಗಳು’ ಚಿತ್ರವನ್ನು ಪ್ರಮುಖ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ, ವಿತರಕರ ಹಿಡಿತದಲ್ಲಿರುವ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ ಎಂಬ ಆರೋಪವನ್ನೂ ನಿರ್ಮಾಪಕರು ಮಾಡಿದ್ದಾರೆ.

ಚಿತ್ರದ ಪೋಸ್ಟರ್‌ಗಳಲ್ಲಿ ‘KVN ವಿತರಣೆ’ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಚಿತ್ರದ ವ್ಯವಹಾರಗಳು SSS ಎಂಟರ್‌ಪ್ರೈಸ್ ಹೆಸರಿನ ಸಂಸ್ಥೆಯ ಮೂಲಕ ನಡೆದಿವೆ. ತಮಗೆ ನೀಡಲಾದ ಇನ್‌ವಾಯ್ಸ್ ಕೂಡ ಅದೇ ಸಂಸ್ಥೆಯಿಂದ ಬಂದಿದೆ ಎಂದು ಪದ್ಮಾವತಿ ಫಿಲಮ್ಸ್ ಆರೋಪಿಸಿದೆ.

ಇದರಿಂದ ತೆರಿಗೆ ವಂಚನೆಯಾಗಿರುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನಿರ್ಮಾಪಕರು ದೂರಿನಲ್ಲಿ ಮನವಿ ಮಾಡಿದ್ದಾರೆ. ವಿತರಣಾ ವ್ಯವಹಾರದಲ್ಲಿನ ಸಂಪೂರ್ಣ ಲೆಕ್ಕಾಚಾರವನ್ನು ಪರಿಶೀಲಿಸಿ, ತಮಗಾಗಿರುವ ನಷ್ಟಕ್ಕೆ ₹2 ಕೋಟಿ ಪರಿಹಾರ ಕೊಡಿಸುವಂತೆ ನಿರ್ಮಾಪಕರ ಸಂಘವನ್ನು ಕೋರಿದ್ದಾರೆ.

ಈ ಆರೋಪಗಳ ಕುರಿತು KVN ಪ್ರೊಡಕ್ಷನ್ಸ್ ಕಡೆಯಿಂದ ಅಧಿಕೃತ ಪ್ರತಿಕ್ರಿಯೆ ಹೊರಬಂದಿರುವುದೇ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.

Related Articles

Back to top button