
ಪ್ರಗತಿವಾಹಿನಿ ಸುದ್ದಿ: ಬರಗಾಲದ ಹೊಡೆತಕ್ಕೆ ಸಿಲುಕಿ ನಲುಗುತ್ತಿರುವ ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮತ್ತೆ ಆಘಾತ ನೀಡಿದೆ. ತಮಿಳುನಾಡಿಗೆ ಮುಂದಿನ 15 ದಿನಗಳವರೆಗೆ ಮತ್ತೆ ಕಾವೇರಿ ನೀರು ಹರಿಸುವಂತೆ ಸೂಚನೆ ನೀಡಿದೆ.
ಇಂದು ನಡೆದ CWRC ಸಭೆಯಲ್ಲಿ ಮುಂದಿನ 15 ದಿನಗಳ ಕಾಲ ನಿತ್ಯ 4 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಆ ಮೂಲಕ ಈಗಾಗಲೇ ಬರದಿಂದ ತತ್ತರಿಸಿರುವ ಕರ್ನಾಟಕಕ್ಕೆ ಗಾಯದ ಮೇಲೆ ಬರೆ ಎಳೆದಿದೆ.
ತಮಿಳುನಾಡಿಗೆ ನಿತ್ಯ 4,000 ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಿಎಂ ಡಿ.ಕೆ ಶಿವಕುಮಾರ್, ಕಾವೇರಿ ಜಲಾಶಯಗಳಲ್ಲಿ ಒಳಹರಿವು ಕಡಿಮೆಯಾಗಿದೆ. ಹೀಗಾಗಿ ಸಿಡಬ್ಲ್ಯುಆರ್‌ಸಿ ಶಿಫಾರಸು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು. ನಮ್ಮ ಮೇಲೆ ಒತ್ತಡ ಇದೆ, ಆದರೆ ಮಳೆ ಬರುತ್ತಿಲ್ಲ. ಸಂಜೆ ಈ ಬಗ್ಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.



