
ಪ್ರಗತಿವಾಹಿನಿ ಸುದ್ದಿ: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಚಿವರ ಪುತ್ರಿ ಸೇರಿ ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಜಾರ್ಖಂಡ್ನ ಕೈಗಾರಿಕಾ ನಗರಿ ಜೆಮ್ಶೇಡ್ಪುರದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸೋನಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಮರೀನ್ ಡ್ರೈವ್ ರಸ್ತೆಯಲ್ಲಿ ಇಂದು ಮುಂಜಾನೆ ಸುಮಾರು 3 ಗಂಟೆಗೆ ಈ ಭೀಕರ ದುರಂತ ನಡೆದಿದೆ. ರಸ್ತೆ ಬದಿ ನಿಂತಿದ್ದ ಸರಕು ಸಾಗಣೆ ಟ್ರೇಲರ್ ಲಾರಿಯ ಹಿಂಭಾಗಕ್ಕೆ ಯುವಕ-ಯುವತಿಯರಿದ್ದ ಕಾರು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಲಾರಿಯ ಕೆಳಗೆ ನುಗ್ಗಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಗ್ಯಾಸ್ ಕಟ್ಟರ್ ಬಳಸಿ ಕಾರಿನ ತಗಡನ್ನು ಕತ್ತರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತರನ್ನು ಸಚಿವರ ಪುತ್ರಿ ತ್ರಿಶಾ ಸಿಂಗ್, ಸಾರ್ಥಕ್ ಅಗರ್ವಾಲ್, ನಮನ್ ಗುಪ್ತಾ ಮತ್ತು ವಂಶಿಕಾ ಖಂಡೇಲ್ವಾಲ್ ಎಂದು ಗುರುತಿಸಲಾಗಿದ್ದು, ಎಲ್ಲ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ.



