*ಮೈಸೂರು ದಸರಾಗೆ ಕಂಬಳದ ಮೆರುಗು*: *160 ಜೊತೆ ಕೋಣಗಳ ಜೋಡುಕರೆ ಓಟಕ್ಕೆ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಈ ಬಾರಿ ಮತ್ತಷ್ಟು ವಿಶೇಷವಾಗಲಿದೆ. ಕರಾವಳಿಯ ಹೆಮ್ಮೆಯ ಕಂಬಳ ಕ್ರೀಡೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಭಾಗವಾಗಿ ಮೈಸೂರಿನಲ್ಲಿ ನಡೆಯಲಿದೆ. ಅಕ್ಟೋಬರ್ 18 ಮತ್ತು 19ರಂದು ‘ವಿಜಯ-ದಶಮಿ’ ಹೆಸರಿನಲ್ಲಿ ಜೋಡುಕರೆ ಕಂಬಳ ಆಯೋಜಿಸಲಾಗಿದ್ದು, ಕರಾವಳಿಯಿಂದ ಸುಮಾರು 150ರಿಂದ 160 ಜೊತೆ ಆಯ್ದ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಮೈಸೂರಿನ ರಿಂಗ್‌ರೋಡ್ ವ್ಯಾಪ್ತಿಯ ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳದ ಕರೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 147 ಮೀಟರ್ ಉದ್ದದ ಕರೆ ಸಿದ್ಧವಾಗುತ್ತಿದೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಕೋಣಗಳ ಯಜಮಾನರು ಹಾಗೂ ಅಧಿಕಾರಿಗಳೊಂದಿಗೆ ಕಂಬಳದ ರೂವಾರಿ ಶಾಸಕ ಅಶೋಕ್ ರೈ ಮತ್ತು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಭೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಿದ್ದಾರೆ.
ಕಂಬಳದ ಕರೆ ಹಾಗೂ ಕೋಣಗಳ ಸುರಕ್ಷತೆ ಪರಿಶೀಲಿಸಲು ಅಕ್ಟೋಬರ್ 15ರಂದು ಐದು ಜೊತೆ ಕೋಣಗಳನ್ನು ಕರೆಸಿ ಪ್ರಾಯೋಗಿಕ ಓಟ ನಡೆಸಲು ನಿರ್ಧರಿಸಲಾಗಿದೆ. ಕರೆ ಓಟಕ್ಕೆ ಸೂಕ್ತವಾಗಿದೆಯೇ, ಕೋಣಗಳಿಗೆ ಯಾವುದೇ ತೊಂದರೆಯಾಗುತ್ತಿದೆಯೇ ಹಾಗೂ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿವೆಯೇ ಎಂಬುದನ್ನು ಈ ಟ್ರಯಲ್ ರನ್‌ನಲ್ಲಿ ಪರಿಶೀಲಿಸಲಾಗುತ್ತದೆ.
ಅಕ್ಟೋಬರ್ 16ರಂದು ಬೆಳಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಕೋಣಗಳು ಜಮಾಯಿಸಲಿವೆ. ಅಲ್ಲಿಂದ ವಿಶೇಷ ವಾಹನಗಳಲ್ಲಿ ಮೈಸೂರಿನತ್ತ ಪ್ರಯಾಣ ಬೆಳೆಸಲಿವೆ. ಘಟ್ಟ ಪ್ರದೇಶದ ಪ್ರಯಾಣದ ವೇಳೆ ಕೋಣಗಳಿಗೆ ತೊಂದರೆಯಾಗದಂತೆ ಮಡಿಕೇರಿಯಲ್ಲಿ 2ರಿಂದ 3 ಗಂಟೆಗಳ ವಿಶ್ರಾಂತಿ ನೀಡಲಾಗುತ್ತದೆ. ಈ ವೇಳೆ ಮೇವು, ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಂದು ರಾತ್ರಿ ಮೈಸೂರು ತಲುಪಲಿರುವ ಕೋಣಗಳಿಗೆ ಅಕ್ಟೋಬರ್ 17ರಂದು ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಅಕ್ಟೋಬರ್ 18ರಂದು ಬೆಳಗ್ಗೆ ಅಧಿಕೃತವಾಗಿ ಮೈಸೂರು ಕಂಬಳಕ್ಕೆ ಚಾಲನೆ ದೊರೆಯಲಿದೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಅಕ್ಟೋಬರ್ 19ರಂದು ತಡರಾತ್ರಿ 12 ಗಂಟೆಯೊಳಗೆ ಬಹುಮಾನ ವಿತರಣೆಯೊಂದಿಗೆ ಕಂಬಳ ಮುಕ್ತಾಯಗೊಳ್ಳಲಿದೆ.
ಸೀನಿಯರ್ ವಿಭಾಗದಲ್ಲಿ ಉತ್ತಮ ಟೈಮಿಂಗ್ ಹೊಂದಿರುವ ಅರ್ಹ ಕೋಣಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಒಟ್ಟು 150ರಿಂದ 160 ಜೊತೆ ಕೋಣಗಳನ್ನು ಸ್ಪರ್ಧೆಗೆ ಆಯ್ಕೆ ಮಾಡುವ ಉದ್ದೇಶವಿದೆ.
ಕಂಬಳದಲ್ಲಿ ಭಾಗವಹಿಸುವ ಕೋಣಗಳ ಮಾಲೀಕರಿಗೆ ಸಾರಿಗೆ ವೆಚ್ಚಕ್ಕೂ ವ್ಯವಸ್ಥೆ ಮಾಡಲಾಗಿದೆ. ದೊಡ್ಡ ಜೊತೆ ಕೋಣಗಳಿಗೆ ₹65 ಸಾವಿರ ಹಾಗೂ ಸಣ್ಣ ಜೊತೆ ಕೋಣಗಳಿಗೆ ₹50 ಸಾವಿರ ಸಾರಿಗೆ ಭತ್ಯೆ ನಿಗದಿಪಡಿಸಲಾಗಿದೆ. ಸೀನಿಯರ್ ವಿಭಾಗದ ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ನೀಡಲು ನಿರ್ಧರಿಸಲಾಗಿದೆ.
ಮೂರನೇ ಹಾಗೂ ನಾಲ್ಕನೇ ಸ್ಥಾನಗಳಿಗೂ ಚಿನ್ನದ ಪದಕ ನೀಡಬೇಕು ಮತ್ತು ಜೂನಿಯರ್ ವಿಭಾಗದ ಬಹುಮಾನ ಮೊತ್ತ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಕೋಣಗಳ ಮಾಲೀಕರು ಮುಂದಿಟ್ಟಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಮೈಸೂರು ಕಂಬಳ ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಗ್ಯಾಲರಿಯಲ್ಲಿ ಒಂದೇ ಬಾರಿಗೆ ಸುಮಾರು 15 ಸಾವಿರ ಮಂದಿ ಕುಳಿತು ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪಾಸ್ ಇಲ್ಲದವರಿಗಾಗಿ ಸುಮಾರು 5 ಸಾವಿರ ಜನರಿಗೆ ಬಯಲು ವೀಕ್ಷಣಾ ವಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಜನರಿಗೆ ಅವಕಾಶ ಕಲ್ಪಿಸಲು ದಿನಕ್ಕೆ ಮೂರು ಬ್ಯಾಚ್‌ಗಳಲ್ಲಿ ಉಚಿತ ಪಾಸ್‌ಗಳನ್ನು ನೀಡುವ ವ್ಯವಸ್ಥೆಯೂ ಇರಲಿದೆ.
ಕೋಣಗಳನ್ನು ಕಟ್ಟುವ ಸ್ಥಳದಲ್ಲೂ ಪ್ರವಾಸಿಗರಿಗೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲಿ ಕೋಣಗಳೊಂದಿಗೆ ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ನೀಡಲು ಸಿದ್ಧತೆ ನಡೆಸಲಾಗಿದೆ.
ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಪ್ರವಾಸಿಗರು ಮೈಸೂರಿಗೆ ಆಗಮಿಸುವ ನಿರೀಕ್ಷೆಯಿದೆ. ಕಂಬಳ ವೀಕ್ಷಣೆಗೆ 25 ಲಕ್ಷಕ್ಕೂ ಹೆಚ್ಚು ಮಂದಿ ಬರಬಹುದು ಎಂಬುದು ಸಂಘಟಕರ ನಿರೀಕ್ಷೆಯಾಗಿದೆ. ಕಂಬಳದ ಜತೆಗೆ ಕರಾವಳಿಯ ಸಾಂಸ್ಕೃತಿಕ ಲೋಕವನ್ನೂ ಮೈಸೂರಿಗೆ ಪರಿಚಯಿಸುವ ಸಿದ್ಧತೆ ನಡೆದಿದೆ.
ಆಹಾರ ಮೇಳ, ವಿವಿಧ ಮಳಿಗೆಗಳು, ತುಳುನಾಡಿನ ಸಾಂಪ್ರದಾಯಿಕ ತಿನಿಸುಗಳು ಹಾಗೂ ಕರಾವಳಿಯ ಜಾನಪದ ಕಲೆಗಳಿಗೆ ವೇದಿಕೆ ಕಲ್ಪಿಸಲು ಯೋಜಿಸಲಾಗಿದೆ. ಮೈಸೂರು ಕಂಬಳದ ಮತ್ತೊಂದು ವಿಶೇಷವೆಂದರೆ ಕನ್ನಡ ಮತ್ತು ತುಳು ಮಿಶ್ರಿತ ರನ್ನಿಂಗ್ ಕಮೆಂಟರಿ. ಕಂಬಳದ ನಿಯಮಗಳು, ಸ್ಪರ್ಧೆಯ ರೋಚಕತೆ ಹಾಗೂ ತುಳುನಾಡಿನ ಸಂಸ್ಕೃತಿಯನ್ನು ಮೈಸೂರಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗುತ್ತಿದೆ.
ಮೈಸೂರು ದಸರಾ ಮಹೋತ್ಸವದ ಭಾಗವಾಗಿಯೇ ಕಂಬಳ ಆಯೋಜಿಸಲಾಗುತ್ತಿರುವುದರಿಂದ ಯಾವುದೇ ಕಾನೂನು ತೊಡಕಿಲ್ಲ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಕಂಬಳಕ್ಕೆ ಸಂಬಂಧಿಸಿದ ಹಿಂದಿನ ಕಾನೂನು ವಿಚಾರಗಳಲ್ಲೂ ನ್ಯಾಯಾಲಯದ ತೀರ್ಪುಗಳು ಬಂದಿವೆ ಎಂದು ಅವರು ಹೇಳಿದ್ದಾರೆ.
ಅರಮನೆಯ ಆನೆಗಳ ಜಂಬೂಸವಾರಿ ಮತ್ತು ದಸರಾ ವೈಭವದ ನಡುವೆ ಕರಾವಳಿಯ ಕೋಣಗಳ ಜೋಡುಕರೆ ಓಟವೂ ಈ ಬಾರಿಯ ಮೈಸೂರು ದಸರಾಕ್ಕೆ ಹೊಸ ಆಯಾಮ ನೀಡಲಿದೆ. ಅಕ್ಟೋಬರ್ 18 ಮತ್ತು 19ರಂದು ನಡೆಯಲಿರುವ ಮೈಸೂರು ಕಂಬಳದತ್ತ ಮೈಸೂರು ಮಾತ್ರವಲ್ಲದೆ ಕರಾವಳಿಯ ಕಂಬಳ ಪ್ರೇಮಿಗಳ ಕಣ್ಣುಗಳೂ ನೆಟ್ಟಿವೆ.




