Kannada NewsKarnataka NewsLatest

*ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿದ ಅರಣ್ಯ ಸಿಬ್ಬಂದಿ*

ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷ ಮುಂದುವರೆದಿದೆ. ಚಿರತೆ, ಕಾಡಾನೆಗಳ ದಾಳಿಗೆ ಹಲವು ಗ್ರಾಮಸ್ಥರು ಕಂಗೆಟ್ಟಿದ್ದಾರೆ. ಈ ನಡುವೆ ಕಳೆದ ಒಂದು ತಿಂಗಳಿಂದ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚುರತೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹೆಚ್.ಹೊಸಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆಚ್.ಹೊಸಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಗೆ ಜನರು ಆತಂಕಕ್ಕೀಡಾಗಿದ್ದರು. ಕಳೆದ ಒಂದು ತಿಂಗಳಿಂದ ಜನಸಾಮಾನ್ಯರು ಹಾಗೂ ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಒಂದು ತಿಂಗಳ ಹಿಂದೆ ಈ ಗ್ರಾಮದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಸುತ್ತಮುತ್ತಲಿನ ಗ್ರಾಮಸ್ಥರನ್ನು ಭಯಭೀತಗೊಳಿಸಿತ್ತು. ಜನರು ಜೀವ ಭಯದಲ್ಲೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಚಿರತೆಯು ಈವರೆಗೆ ಒಟ್ಟು 8 ಮೇಕೆಗಳು, 2 ನಾಯಿಗಳು, 1 ಹಸುವಿನ ಕರು ಹಾಗೂ 1 ಎಮ್ಮೆ ಕರುವನ್ನು ಬೇಟೆಯಾಡಿ ತಿಂದು ತೇಗಿತ್ತು.

ಚಿರತೆ ದಾಳಿಗೆ ರೈತರು ಜಮೀನುಗಳಿಗೆ ತೆರಳಲು ಹೆದರುತ್ತಿದ್ದರು. ಕೂಡಲೇ ಚಿರತೆಯನ್ನ ಸೆರೆಹಿಡಿಯುವಂತೆ ಸಾರ್ವಜನಿಕರುಆಗ್ರಹಿಸಿದ್ದರು. ಜನರ ಬೇಡಿಕೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಬೋನ್ ಇರಿಸಿದ್ದರು. ಬೋನಿನೊಳಗೆ ನಾಯಿಯನ್ನ ಇರಿಸಲಾಗಿದ್ದು, ಅದನ್ನ ತಿನ್ನಲು ಬಂದ ಚಿರತೆ ಇಲಾಖೆಯ ಬಲೆಗೆ ಬಿದ್ದಿದೆ.

ಚಿರತೆ ಸೆರೆಯಾಗುತ್ತಿದ್ದಂತೆ ಹೆಚ್.ಹೊಸಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಸಧ್ಯ ಭಯವಿಲ್ಲದೇ ಆರಾಮವಾಗಿ ಓಡಾಡುವಂತಾಯಿತು ಎಂದು ನೆಮ್ಮದಿ ಕಂಡುಕೊಂಡಿದ್ದಾರೆ. ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button