*ಅಧಿಕಾರಿಗಳ ಎಡವಟ್ಟು: ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ; ಬ್ಯಾಂಕ್ ಖಾತೆ, ರೇಷನ್ ರದ್ದಾಗಿ ಕಣ್ಣೀರಿಟ್ಟ ಕುಟುಂಬ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಅಧಿಕಾರಿಗಳು ಮಾಡುವ ಒಂದು ಸಣ್ಣ ತಪ್ಪು ಒಂಡಿಡೀ ಕುಟುಂಬವೇ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ. ಅಧಿಕಾರಿಗಳ ನಿರ್ಲಕ್ಷದಿಂದಾಗಿ ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರದ ದಾಖಲೆ ನೀಡಿದ್ದು, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ರದ್ದಾಗಿ ಪರದಾಡುವಂತಾಗಿದೆ.
ಮಂಡ್ಯ ನಗರದ ಗುತ್ತಲು ಬಡಾವಣೆಯ ಟಿಪ್ಪು ರಸ್ತೆ ನಿವಾಸಿ ಶಫಿಉಲ್ಲಾ ಖಾನ್ ಎಂಬವರು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಸಣ್ಕಷ್ಟಕ್ಕೆ ಸಿಲುಕಿದ್ದಾರೆ. ಶಫಿಉಲ್ಲಾ ಖಾನ್ ಅವರಿಗೆ ಕಳೆದ ಎರಡು ತಿಂಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಸಿಗುತ್ತಿರಲಿಲ್ಲ. ಇದರಿಂದ ಅನುಮಾನಗೊಂಡು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಹೋದಾಗ ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಶಾಕ್ ಆಗಿದ್ದಾರೆ. “ನೀವು 2024ರಲ್ಲಿಯೇ ಸಾವನ್ನಪ್ಪಿದ್ದೀರಿ ಎಂದು ಅಪ್ಡೇಟ್ ಆಗಿದೆ” ಎಂದು ಸಿಬ್ಬಂದಿ ಹೇಳಿದ್ದಾರೆ.
ತಕ್ಷಣ ಶಫಿಉಲ್ಲಾ ಖಾನ್ ನಗರಸಭೆಗೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆಗ ಮಂಡ್ಯದ ಮಿಮ್ಸ್ ಆಸ್ಪತ್ರೆ ನೀಡಿದ ಮರಣ ವರದಿಯ ಆಧಾರದ ಮೇಲೆ ನಗರಸಭೆಯಿಂದ ‘ಡೆತ್ ಸರ್ಟಿಫಿಕೇಟ್’ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಾರೋ ಮಾಡಿದ ತಪ್ಪಿಗೆ ಶಫಿಉಲ್ಲಾ ಖಾನ್ ಅವರ ಹೆಸರು ರೇಷನ್ ಕಾರ್ಡ್ ಹಾಗೂ ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಡಿಲೀಟ್ ಆಗಿದೆ. ಅಷ್ಟೇ ಅಲ್ಲದೆ, ಜೀವಂತವಾಗಿದ್ದರೂ ಸತ್ತಿದ್ದಾರೆ ಎಂದು ದಾಖಲಾಗಿರುವುದರಿಂದ ಅವರ ಬ್ಯಾಂಕ್ ಖಾತೆ ವಹಿವಾಟುಗಳೂ ಸ್ತಬ್ಧವಾಗಿವೆ.
ಆಗಿರುವ ತಪ್ಪನ್ನು ತಿದ್ದುಪಡಿ ಮಾಡಿ, ನಾನಿನ್ನೂ ಬದುಕಿದ್ದೇನೆ ಎಂದು ಶಫಿಉಲ್ಲಾ ಖಾನ್ ಸರಕಾರಿ ಕಚೇರಿಗಳಿಗೆ ಪ್ರತಿದಿನ ಅಲೆಯುತ್ತಿದ್ದರೂ ಅಧಿಕಾರಿಗಳು ಕನಿಷ್ಠ ಸ್ಪಂದನೆ ನೀಡುತ್ತಿಲ್ಲ. ಇದರಿಂದ ಬೇಸತ್ತಿರುವ ಶಫಿಉಲ್ಲಾ, ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಅಲ್ಲಿಯೂ ಬೇಜವಬ್ದಾರಿ ಮೆರೆದಿದ್ದಾರೆ. ತನಗೆ ನ್ಯಾಯ ಕೊಡಿಸುವಂತೆ ಶಫಿಉಲ್ಲಾ ಕಣ್ಣೀರಿಟ್ಟಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



