LatestNationalPolitics

*ನವಜಾತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ: ‘ತಾಯಿ ಮಾಮನ್’ ಯೋಜನೆಗೆ ಚಾಲನೆ ನೀಡಿದ ಸಿಎಂ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ನವಜಾಅತ ಶಿಶುಗಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡುವ ’ತಾಯಿ ಮಾಮನ್ ತಂಗ ಮೋದಿರ” ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಚಾಲನೆ ನೀಡಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆಗೂ ಮುನ್ನ ಟಿವಿಕೆ ಪ್ರಚಾರ ಸಭೆಯಲ್ಲಿ ವಿಜಯ್ ಈ ವಿನೂತನ ಯೋಜನೆಯನ್ನು ಘೋಷಿಸಿದ್ದರು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ 1ಗ್ರಾಂ ಚಿನ್ನದ ಉಂಗುರವನ್ನು ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.

ಚೆನ್ನೈನಲ್ಲಿ ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ ಭೇಟಿ ನೀಡಿದ ಸಿಎಂ ವಿಜಯ್, ನವಜಾತ ಶಿಶುಗಳಿಗೆ ಆಶೀರ್ವದಿಸಿದರು. ಬಳಿಕ ಶಿಶುಗಳ ಪೋಷಕರಿಗೆ ಉಂಗುರಗಳನ್ನು ವಿತರಿಸಿದರು. ಈ ಮೂಲಕ ನವಜಾತ ಕಂದಮ್ಮಗಳಿಗೆ 1 ಗ್ರಾ ಚಿನ್ನದ ಉಂಗುರ ಯೋಜನೆಗೆ ಚಾಲನೆ ನೀಡಿದರು. ಮದುರೈ ಸೇರಿದಂತೆ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಜನ್ಮ ನೀಡಿದ ತಾಯಂದಿರಿಗೆ ಈ ಭಾಗ್ಯ ದೊರೆಯುತ್ತಿದೆ.

ಈ ಯೋಜನೆಯ ಮೂಲಕ, ಸಿಎಂ ವಿಜಯ್ ಅವರು ಸೋದರ ಮಾವನಂತೆ ಮಹಿಳೆಯರಿಗೆ ಬೆಂಬಲ ನೀಡುತ್ತಿದ್ದಾರೆ ಎಂಬ ಸಂದೇಶವನ್ನು ನೀಡಿದ್ದಾರೆ. ಈ ಹಿಂದೆ ಜಯಲಲಿತಾ ಅವರ ಹೆಸರಿನಲ್ಲಿ ಆರಂಭವಾಗಿದ್ದ ಅನೇಕ ಜನಪರ ಯೋಜನೆಗಳ ಮುಂದುವರಿದ ಭಾಗವಾಗಿ ಇದನ್ನು ನೋಡಲಾಗುತ್ತಿದೆ.

ಇನ್ನು ಈ ಯೋಜನೆಗೆ ಅರ್ಹತೆ ಪಡೆಯಲು, ನವಜಾತ ಶಿಶುಗಳ ತಾಯಂದಿರು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು. ಈ ಯೋಜನೆಗಾಗಿ ರಾಜ್ಯ ಸರ್ಕಾರ ವಾರ್ಷಿಕ 755.83 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಈಗಾಗಲೇ 1.28 ಲಕ್ಷ ಉಂಗುರಗಳನ್ನು ಸಿದ್ಧಪಡಿಸಿ ಇಡಲಾಗಿದೆ. ಈ ಉಂಗುರಗಳು ವಿಶಿಷ್ಟ ಸರಣಿ ಸಂಖ್ಯೆಗಳನ್ನು ಹೊಂದಿರುತ್ತವೆ. ಟ್ಯಾಂಪರ್-ಪ್ರೂಫ್ ಪ್ಯಾಕೇಜಿಂಗ್‌ನಲ್ಲಿ ಈ ಉಂಗುರಗಳನ್ನು ವಿತರಿಸಲಾಗುತ್ತದೆ ಎಂಬುದು ವಿಶೇಷ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button