Kannada NewsKarnataka NewsLatest

*4 ವರ್ಷಗಳಲ್ಲಿ ರಾಜಕೀಯದಲ್ಲಿ ಭಾರೀ ಬದಲಾವಣೆ* *111 ಜನಪ್ರತಿನಿಧಿಗಳ ಪಕ್ಷಾಂತರ: 2ನೇ ಸ್ಥಾನದಲ್ಲಿ BJP, ನಂ.1 ಯಾರು?*

ಪ್ರಗತಿವಾಹಿನಿ ಸುದ್ದಿ: ಚುನಾವಣೆ ಹತ್ತಿರ ಬಂದಾಗ ಟಿಕೆಟ್ ಸಿಗದೆ ಪಕ್ಷ ಬದಲಿಸುವುದು, ಗೆದ್ದ ಬಳಿಕ ಸಚಿವ ಸ್ಥಾನ ಸಿಗದೆ ಬೇರೆ ಪಕ್ಷ ಸೇರುವುದು ರಾಜಕೀಯದಲ್ಲಿ ಹೊಸ ವಿಚಾರವೇನಲ್ಲ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಕಳೆದ ನಾಲ್ಕು ವರ್ಷಗಳ ಅಂಕಿ ಅಂಶ ಇದೀಗ ರಾಜಕೀಯದಲ್ಲಿ ಹೊಸ ಚರ್ಚೆಗೆ ಹುಟ್ಟುಹಾಕಿದೆ.

2022ರಿಂದ 2026ರ ಅವಧಿಯಲ್ಲಿ ಚುನಾವಣೆ ಗೆದ್ದು ಹಾಲಿ ಸ್ಥಾನದಲ್ಲಿದ್ದ 111 ಸಂಸದರು ಮತ್ತು ಶಾಸಕರು ಪಕ್ಷ ಬದಲಾಯಿಸಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ವರದಿ ತಿಳಿಸಿದೆ. ಈ ಪೈಕಿ 26 ಲೋಕಸಭಾ ಸದಸ್ಯರು, 7 ರಾಜ್ಯಸಭಾ ಸದಸ್ಯರು ಹಾಗೂ 78 ಶಾಸಕರಿದ್ದಾರೆ. 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಕ್ಷಾಂತರ ಪ್ರಕರಣಗಳು ದಾಖಲಾಗಿವೆ.

ಈ 111 ಮಂದಿಯಲ್ಲಿ 32 ಮಂದಿ ನಾಗಾ ಪೀಪಲ್ಸ್ ಫ್ರಂಟ್ (NPF) ಸೇರಿದ್ದು, ಒಟ್ಟು ಪಕ್ಷಾಂತರಿಗಳ ಶೇ.29ರಷ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 20 ಹಾಗೂ ತೆಲಂಗಾಣದಲ್ಲಿ 9 ಪಕ್ಷಾಂತರ ಪ್ರಕರಣಗಳು ದಾಖಲಾಗಿವೆ. NPFಗೆ 32 ಮಂದಿ ಸೇರ್ಪಡೆಗೊಂಡಿರುವ ಸಂಖ್ಯೆಯಲ್ಲಿ ನಾಗಾಲ್ಯಾಂಡ್‌ನ NDPP- NPF ವಿಲೀನದ ಪ್ರಕರಣಗಳೂ ಸೇರಿವೆ ಎಂದು ADR ಸ್ಪಷ್ಟಪಡಿಸಿದೆ.

ಬಿಜೆಪಿಗೆ 29 ಹಾಲಿ ಸಂಸದರು ಮತ್ತು ಶಾಸಕರು ಸೇರ್ಪಡೆಗೊಂಡಿದ್ದು, ಪಕ್ಷ ಸೇರಿದವರ ಪಟ್ಟಿಯಲ್ಲಿ ಶೇ.26ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ 29 ಮಂದಿಯಲ್ಲಿ 7 ರಾಜ್ಯಸಭಾ ಸದಸ್ಯರು ಹಾಗೂ 22 ಶಾಸಕರಿದ್ದಾರೆ. ಹಾಲಿ ಲೋಕಸಭಾ ಸದಸ್ಯರು ಬಿಜೆಪಿ ಸೇರಿದ ಪ್ರಕರಣ ಈ ವರದಿಯಲ್ಲಿ ದಾಖಲಾಗಿಲ್ಲ.

ಬಿಜೆಪಿ ಸೇರಿದ ಏಳು ರಾಜ್ಯಸಭಾ ಸದಸ್ಯರು ಆಮ್ ಆದ್ಮಿ ಪಕ್ಷದಿಂದ ಆಯ್ಕೆಯಾಗಿದ್ದ ರಾಘವ್ ಚಡ್ಡಾ, ಸ್ವಾತಿ ಮಲಿವಾಲ್, ಅಶೋಕ್ ಮಿತ್ತಲ್, ಹರ್ಭಜನ್ ಸಿಂಗ್, ಸಂದೀಪ್ ಕುಮಾರ್ ಪಾಠಕ್, ವಿಕ್ರಮಜಿತ್ ಸಿಂಗ್ ಸಹನೆ ಹಾಗೂ ರಾಜೀಂದರ್ ಗುಪ್ತ. ಉಳಿದಂತೆ ವಿವಿಧ ರಾಜ್ಯಗಳ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ADR ವರದಿ ಹೇಳಿದೆ. ಒಟ್ಟಾರೆ ನ್ಯಾಷನಲಿಸ್ಟ್ ಪೀಪಲ್ಸ್ ಫ್ರಂಟ್, ಬಿಜೆಪಿ ಹಾಗೂ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಸೇರಿ 111 ಪಕ್ಷಾಂತರಿಗಳ ಪೈಕಿ 81 ಮಂದಿಯನ್ನು ಒಳಗೊಂಡಿವೆ.

ಕರ್ನಾಟಕಕ್ಕೆ ಸಂಬಂಧಿಸಿದಂತೆ ADR ವರದಿಯಲ್ಲಿ ಒಂದು ಪಕ್ಷಾಂತರ ಪ್ರಕರಣ ದಾಖಲಾಗಿದೆ. ಈ ವರದಿಯು ವೈಯಕ್ತಿಕ ಪಕ್ಷಾಂತರದ ಜೊತೆಗೆ ಪಕ್ಷ ವಿಲೀನ, ರಾಜೀನಾಮೆ ಬಳಿಕ ಉಪಚುನಾವಣೆಯಲ್ಲಿ ಗೆಲುವು ಹಾಗೂ ಅನರ್ಹತೆ ಬಳಿಕ ಮರು ಆಯ್ಕೆಯಾದ ಪ್ರಕರಣಗಳನ್ನೂ ಒಳಗೊಂಡಿದೆ. ಜನಪ್ರತಿನಿಧಿಗಳು ಪಕ್ಷ ಬದಲಿಸುವುದಕ್ಕೆ ಕಾರಣಗಳೇನು ಅನ್ನೋ ಪ್ರಶ್ನೆಯೂ ಈಗ ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button