Film & EntertainmentKannada NewsKarnataka NewsLatest

*ರೇಣುಕಾಸ್ವಾಮಿ ಕೇಸ್‌ಗೆ ಬಿಗ್‌ ಟ್ವಿಸ್ಟ್‌*: *3 ಗಂಟೆ ಪ್ರದೋಷ್‌ ಸಾಕ್ಷ್ಯ, ಇಂದು ಮತ್ತೆ ವಿಚಾರಣೆ*!

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಮಾಫಿ ಸಾಕ್ಷಿಯಾಗಿರುವ ಆರೋಪಿ ಪ್ರದೋಷ್ ಎಸ್. ರಾವ್ ಸೆಷನ್ಸ್ ಕೋರ್ಟ್ ಮುಂದೆ ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಘಟನೆ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಪ್ರದೋಷ್ ಹೇಳಿಕೆ ನೀಡಿದ್ದಾರೆ. ಇಂದು ಕೂಡ ಸಾಕ್ಷ್ಯ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ.

ಪರಪ್ಪನ ಅಗ್ರಹಾರ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಪ್ರದೋಷ್ ಅವರನ್ನು ನ್ಯಾಯಾಲಯಕ್ಕೆ ಕರೆತರಲಾಗಿದ್ದು, ಬಳಿಕ ನ್ಯಾಯಾಧೀಶರ ಸಮ್ಮುಖದಲ್ಲಿ ಇನ್-ಕ್ಯಾಮೆರಾ ಪ್ರಕ್ರಿಯೆ ಮೂಲಕ ಹೇಳಿಕೆ ದಾಖಲಿಸಲಾಯಿತು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಕೆಲವು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರೆ, ಉಳಿದ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.

ದರ್ಶನ್ ಜೊತೆಗಿನ ಪರಿಚಯ ಮತ್ತು ಸ್ನೇಹ, ರೇಣುಕಾಸ್ವಾಮಿ ಅಪಹರಣ, ಸ್ಟೋನಿ ಬ್ರೂಕ್‌ನಲ್ಲಿ ನಡೆದ ಸಭೆ, ಪಟ್ಟಣಗೆರೆ ಶೆಡ್‌ನಲ್ಲಿನ ಬೆಳವಣಿಗೆಗಳು ಹಾಗೂ ನಂತರ ಮೃತದೇಹ ಸಾಗಿಸಿದ ವಿಚಾರಗಳ ಕುರಿತು ಪ್ರದೋಷ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದಲ್ಲಿ ಹಣದ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳ ಬಗ್ಗೆಯೂ ನ್ಯಾಯಾಲಯದಲ್ಲಿ ಮಾಹಿತಿ ನೀಡಲಾಗಿದೆ. ಈ ವಿವರಗಳು ಪ್ರದೋಷ್ ಈ ಹಿಂದೆ ಸಲ್ಲಿಸಿದ್ದ ಮಾಫಿ ಅರ್ಜಿಯಲ್ಲಿನ ಅಂಶಗಳಿಗೆ ಸಂಬಂಧಿಸಿವೆ ಎಂದು ವರದಿಯಾಗಿದೆ.

ಈ ನಡುವೆ ಪ್ರದೋಷ್‌ಗೆ ಮಾಫಿ ಸಾಕ್ಷಿ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ ದರ್ಶನ್ ಪರ ನಡೆಸಿದ್ದ ಕಾನೂನು ಹೋರಾಟಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸೆ.23ರಂದು ಕರ್ನಾಟಕ ಹೈಕೋರ್ಟ್ ಪ್ರದೋಷ್‌ಗೆ ನೀಡಿರುವ ಮಾಫಿ ಸಾಕ್ಷಿ ಸ್ಥಾನಮಾನವನ್ನು ಎತ್ತಿಹಿಡಿದಿದ್ದು, ವಿಚಾರಣೆಯ ವೇಳೆ ಪ್ರದೋಷ್ ಅವರನ್ನು ಅಡ್ಡಪರಿಶೀಲನೆ ನಡೆಸಲು ದರ್ಶನ್‌ಗೆ ಕಾನೂನುಬದ್ಧ ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ.

ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇಂದು ಕೂಡ ಮುಂದುವರಿಯಲಿದೆ. ಬಳಿಕ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಮುಖ್ಯ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಮಾಫಿ ಸಾಕ್ಷಿಯಾಗಿ ಪ್ರದೋಷ್ ಪ್ರಕರಣದ ಇತರ ಆರೋಪಿಗಳ ಪಾತ್ರದ ಬಗ್ಗೆ ನೀಡುವ ಹೇಳಿಕೆಗಳು ಮುಂದಿನ ವಿಚಾರಣೆಯಲ್ಲಿ ಪ್ರಮುಖವಾಗಲಿವೆ. ಮಾಫಿ ಸಾಕ್ಷಿ ಸ್ಥಾನಮಾನಕ್ಕೆ ಷರತ್ತುಬದ್ಧವಾಗಿ ಪೂರ್ಣ ಹಾಗೂ ಸತ್ಯವಾದ ಮಾಹಿತಿ ನೀಡಬೇಕೆಂಬ ಕಡ್ಡಾಯವಿದೆ; ಷರತ್ತು ಉಲ್ಲಂಘಿಸಿದರೆ ಮತ್ತೆ ಆರೋಪಿಯಾಗಿ ಪರಿಗಣಿಸುವ ಸಾಧ್ಯತೆಯೂ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button