Kannada NewsKarnataka NewsLatest

*ಡಿಕೆಶಿ ​ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ HDK*: *ಭೂ ವ್ಯವಹಾರಗಳ ದಾಖಲೆ ಬಿಡುಗಡೆ* 

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಂಬದ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೂ ವ್ಯವಹಾರಗಳಿಗೆ ಸಂಬಂಧಿಸಿದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, 2003ರಿಂದ 2023ರವರೆಗಿನ ಆಸ್ತಿ ವಿವರಗಳು ಹಾಗೂ NICE-BMIC ಯೋಜನೆ ವ್ಯಾಪ್ತಿಯ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಆರೋಪಗಳಿಗೆ ಪೂರಕವಾಗಿ ಹಲವು ದಾಖಲೆಗಳನ್ನು ಮುಂದಿಟ್ಟಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. NICE-BMIC ಯೋಜನೆಗೆ ಸಂಬಂಧಿಸಿದ ಭೂ ವಿವಾದ ಈಗಾಗಲೇ ರಾಜ್ಯ ರಾಜಕೀಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ.

ಕುಮಾರಸ್ವಾಮಿ ಆರೋಪದ ಪ್ರಕಾರ, ಡಿ.ಕೆ. ಶಿವಕುಮಾರ್ ಕುಟುಂಬದ ಹೆಸರಿನಲ್ಲಿ NICE ಯೋಜನೆ ವ್ಯಾಪ್ತಿಯ ಜಮೀನು ಖರೀದಿ ನಡೆದಿದೆ. ಸರ್ಕಾರದ ಯೋಜನೆಗೆ ಸಂಬಂಧಿಸಿದ ಜಮೀನುಗಳ ಖರೀದಿ ಹಾಗೂ ದಾಖಲೆಗಳಲ್ಲಿನ ಬದಲಾವಣೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಕುಮಾರಸ್ವಾಮಿ, 2004ರಲ್ಲಿ ಡಿ.ಕೆ. ಸುರೇಶ್ ಜಮೀನು ಖರೀದಿಸಿದ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ 2026ರಲ್ಲಿ ಡಿ.ಕೆ. ಶಿವಕುಮಾರ್ ಪುತ್ರಿಯ ಹೆಸರಿನಲ್ಲಿ ಜಮೀನು ಖರೀದಿಯಾಗಿದೆ ಎಂದು ಆರೋಪಿಸಿದ್ದಾರೆ.

NICE ಯೋಜನೆ ವ್ಯಾಪ್ತಿಯಲ್ಲಿರುವ ಗೋಮಾಳ ಹಾಗೂ KIADBಗೆ ಸಂಬಂಧಿಸಿದ ಜಮೀನುಗಳ ವಿಚಾರವನ್ನೂ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ನೂರಾರು ಎಕರೆ ಜಮೀನು ಪಡೆದುಕೊಳ್ಳಲಾಗಿದೆ ಎಂಬ ಆರೋಪ ಮಾಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ್ದಾರೆ. ತಮ್ಮ ವಿರುದ್ಧ ಬ್ಲ್ಯಾಕ್‌ಮೇಲ್ ಆರೋಪ ಮಾಡಲಾಗುತ್ತಿದೆ ಎಂದು ಹೇಳಿರುವ ಕುಮಾರಸ್ವಾಮಿ, ಭೂ ವ್ಯವಹಾರಗಳ ಬಗ್ಗೆ ಉತ್ತರ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ಇದೇ ವೇಳೆ BMIC ಯೋಜನೆಗಾಗಿ ಸಿದ್ಧಗಂಗಾ ಮಠಕ್ಕೆ ಸೇರಿದ ಜಮೀನಿನ ವಿಚಾರವನ್ನೂ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಯೋಜನೆಗಾಗಿ ಮಠದ 7 ಎಕರೆ ಜಮೀನು ಪಡೆದಿದ್ದು, ರಸ್ತೆಗೆ ಒಂದು ಎಕರೆ ಬಳಕೆಯಾದ ಬಳಿಕ ಉಳಿದ ಜಮೀನು ಹಿಂತಿರುಗಿಸುವಂತೆ ಮನವಿ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನೂ ಬಿಡುಗಡೆ ಮಾಡಿರುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.

NICE-BMIC ಯೋಜನೆಗೆ ಸಂಬಂಧಿಸಿದ ಭೂ ವ್ಯವಹಾರಗಳ ಕುರಿತು ಈಗಾಗಲೇ ಕರ್ನಾಟಕ ಹೈಕೋರ್ಟ್ ಕೂಡ ಹಲವು ಗಂಭೀರ ಅಂಶಗಳನ್ನು ದಾಖಲಿಸಿದೆ. ಜುಲೈನಲ್ಲಿ ನೀಡಿದ ತೀರ್ಪಿನಲ್ಲಿ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ, ಪರಿಹಾರ ಹಾಗೂ ಯೋಜನೆಯ ಅನುಷ್ಠಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿತ್ತು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಾಡಿರುವ ಹೊಸ ಆರೋಪಗಳು ರಾಜಕೀಯ ವಲಯದಲ್ಲಿ ಮತ್ತೆ NICE-BMIC ವಿವಾದವನ್ನು ಮುನ್ನೆಲೆಗೆ ತಂದಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button