Kannada NewsKarnataka NewsLatest

*ಬಸವರಾಜ್ ಕನ್ನಾಳೆ ಇಡಿ ಕಸ್ಟಡಿಗೆ: ಡೈರಿಯಲ್ಲಿ ಪತ್ತೆಯಾಯ್ತು ಸ್ಫೋಟಕ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ಮಧ್ಯವರ್ತಿ ಬಸವರಾಜ್ ಕನ್ನಾಳೆಯನ್ನು ಇಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಇಡಿ ಅಧಿಕಾರಿಗಳು ಇಂದು ಬಸವರಾಜ್ ಕನ್ನಾಳೆಯನ್ನು 4ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ 14 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.

ಬಸವರಾಜ್ ಕನ್ನಾಳೆ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದ ಹಣದ ವ್ಯವಹಾರದ ಮಾಹಿತಿ ಇಡಿ ತನಿಖೆ ವೇಳೆ ಬಯಲಾಗಿದೆ. ಎಂಟು ಅಭ್ಯರ್ಥಿಗಳಿಂದ ಬರಬೇಕಿದ್ದ ಹಣದ ಬಗ್ಗೆ ಡೈರಿಯಲ್ಲಿ ಕನ್ನಾಳೆ ಉಲ್ಲೇಖಿಸಿದ್ದಾನೆ. ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಮೋಹನ್ ಕುಮಾರ್, ಸಂಗಮೇಶ್, ಪದ್ಮಾವತಿ ಮತ್ತು ಹರೀಶ್ ಸೇರಿದಂತೆ ಹಲವರ ಹೆಸರುಗಳನ್ನು ಡೈರಿಯಲ್ಲಿ ನಮೂದಿಸಿರುವುದು ಪತ್ತೆಯಾಗಿದೆ.

ಮಂಜುನಾಥ್, ಪೂಜಾ, ಅಶ್ವಿನಿ ಕುಮಾರ್, ಸಂಗಮೇಶ್, ಪದ್ಮಾವತಿ, ಹರೀಶ್ ಅವರಿಂದ ತಲಾ 10 ಲಕ್ಷ ರೂ. ಹಾಗೂ ಮೋಹನ್ ಕುಮಾರ್ ಅವರಿಂದ 5 ಲಕ್ಷ ರೂ. ಬಾಕಿ ಬರಬೇಕೆಂದು ಡೈರಿಯಲ್ಲಿ ದಾಖಲಿಸಿದ್ದಾನೆ. 20ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ಸಂಗತಿಯೂ ತನಿಖೆಯಿಂದ ಬಹಿರಂಗವಾಗಿದೆ.

ಇನ್ನು ಕೆಪಿಎಸ್‌ಸಿ ಅಕ್ರಮದ ಕಿಂಗ್ ಪಿನ್ ಕನ್ನಾಳೆ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹುದ್ದೆಗಳ ಆಕಾಂಕ್ಷಿಗಳಿಂದ 1.5 ಕೋಟಿ ರೂ. ಸಂಗ್ರಹ ಮಾಡಿದ್ದರು. ಆ ಹಣದ ಪೈಕಿ, 1.3 ಕೋಟಿಯನ್ನು ಐಎಎಸ್ ಅಧಿಕಾರಿ ಜ್ಞಾನೇಂದ್ರಗೆ ನೀಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button