*ಇನ್ಸ್ಟಾಗ್ರಾಂ ಹನಿಟ್ರ್ಯಾಪ್ ಮೂಲಕ ಯುವಕನ ಕೊಲೆ: ಬೆಳಗಾವಿಯಲ್ಲಿ ನಾಲ್ವರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾಣೆಯಾಗಿದ್ದ ಯುವಕನೊಬ್ಬನ ಕೊಲೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಇನ್ಸ್ಟಾಗ್ರಾಂ ಮೂಲಕ ಹನಿಟ್ರ್ಯಾಪ್ ಮಾಡಿ ಯುವಕನನ್ನು ಬಲೆಗೆ ಬೀಳಿಸಿ ಕೊಲೆ ಮಾಡಿರುವ ಆರೋಪದ ಮೇಲೆ ನಾಲ್ವರನ್ನು ಬೆಳಗಾವಿ ನಗರ ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕನನ್ನು ಗಾಂಧಿನಗರದ ಸರ್ವೇಶ ಕಂಗ್ರಾಳಕರ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿ ಜಾಲಗಾರ, ರಾಹುಲ್ ಜಾಲಗಾರ, ದಶರತ ರಜಪೂತ ಹಾಗೂ ಅರುಣ ಹುಲ್ಲೋಳಿ ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ಅವರ ಮಾರ್ಗದರ್ಶನದಲ್ಲಿ, ಮಾಳಮಾರುತಿ ಠಾಣೆ ಸಿಪಿಐ ಬಿ.ಆರ್. ಗಡೇಕರ್ ನೇತೃತ್ವದ ತಂಡ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.
ಹಳೆ ವೈಷಮ್ಯವೇ ಕೊಲೆಗೆ ಕಾರಣ?
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, 2025ರಲ್ಲಿ ನಡೆದ ಹಣಕಾಸಿನ ವಿಚಾರದ ಜಗಳವೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ವೇಳೆ ಸರ್ವೇಶ ಹಾಗೂ ಶಶಿ ಜಾಲಗಾರ ನಡುವೆ ಗಲಾಟೆ ನಡೆದಿದ್ದು, ಸರ್ವೇಶನಿಂದ ಶಶಿ ಮೇಲೆ ಹಲ್ಲೆ ನಡೆದಿತ್ತು ಎನ್ನಲಾಗಿದೆ. ಇದರಿಂದ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು.
ಹಳೆ ದ್ವೇಷವನ್ನೇ ಮುಂದಿಟ್ಟುಕೊಂಡು ಶಶಿ ಜಾಲಗಾರ ತನ್ನ ಸಹಚರರೊಂದಿಗೆ ಸೇರಿ ಸರ್ವೇಶನ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ಸ್ಟಾಗ್ರಾಂ ಮೂಲಕ ಬಲೆ
ಕೊಲೆಗೆ ಆರೋಪಿಗಳು ಇನ್ಸ್ಟಾಗ್ರಾಂ ಅನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಸುಂದರ ಯುವತಿಯ ಹೆಸರಿನಲ್ಲಿ ಸೃಷ್ಟಿಸಿದ್ದ ಇನ್ಸ್ಟಾಗ್ರಾಂ ಖಾತೆಯಿಂದ ಸರ್ವೇಶನಿಗೆ ಸಂದೇಶ ಕಳುಹಿಸಿ ಆತನೊಂದಿಗೆ ಆತ್ಮೀಯತೆ ಬೆಳೆಸಲಾಗಿತ್ತು.
ಬಳಿಕ ಮನೆಯಲ್ಲೇ ಯಾರೂ ಇಲ್ಲ ಎಂದು ಹೇಳಿ ಸರ್ವೇಶನನ್ನು ನಿರ್ದಿಷ್ಟ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಅಲ್ಲಿಗೆ ಬಂದ ಸರ್ವೇಶನನ್ನು ಆರೋಪಿಗಳು ಅಪಹರಿಸಿ ನಾನಾವಾಡಿ ಪ್ರದೇಶದಲ್ಲಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆ ಬಳಿಕ ಮೃತದೇಹವನ್ನು ಖಾನಾಪುರ ತಾಲೂಕಿನ ಜಾಂಬೋಟಿ ಬಳಿ ಎಸೆದು ಆರೋಪಿಗಳು ಪರಾರಿಯಾಗಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತಾಂತ್ರಿಕ ತನಿಖೆಯಿಂದ ಸಿಕ್ಕ ಸುಳಿವು
ಸರ್ವೇಶ ಕಾಣೆಯಾಗಿರುವ ಕುರಿತು ಕುಟುಂಬಸ್ಥರು ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದರು.
ಈ ವೇಳೆ ಇನ್ಸ್ಟಾಗ್ರಾಂ ಸಂಭಾಷಣೆ ಹಾಗೂ ಸರ್ವೇಶ ಮತ್ತು ಶಶಿ ಜಾಲಗಾರ ನಡುವಿನ ಹಳೆಯ ವೈಷಮ್ಯದ ಬಗ್ಗೆ ಪೊಲೀಸರಿಗೆ ಸುಳಿವು ದೊರೆತಿದ್ದು, ತನಿಖೆ ಮುಂದುವರಿಸಿದಾಗ ಆರೋಪಿಗಳ ಬಂಧನವಾಗಿದೆ.
ಸದ್ಯ ನಾಲ್ವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಹನಿಟ್ರ್ಯಾಪ್ಗೆ ಬಳಸಲಾಗಿದ್ದ ಯುವತಿ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಉಳಿದ ಆರೋಪಿಗಳನ್ನೂ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಪ್ರಕಾಶ ನಿಕಮ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




