*ಪಾಲಿಕೆ ಸಭೆಗೆ ವೀಕ್ಷಕರ ಆಗಮನ: ಸರ್ಕಾರದ ಕ್ರಮಕ್ಕೆ ಸದಸ್ಯರ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಸರ್ಕಾರದ ವತಿಯಿಂದ ವೀಕ್ಷಕರನ್ನು ನಿಯೋಜಿಸಿರುವ ವಿಚಾರ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ವೀಕ್ಷಕರನ್ನು ಕಳುಹಿಸಿರುವ ಕ್ರಮವನ್ನು ಪ್ರಶ್ನಿಸಿದ ಪಾಲಿಕೆ ಸದಸ್ಯರು, ಈ ಕುರಿತು ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದರು.
ಸಾಮಾನ್ಯವಾಗಿ ಚುನಾವಣೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ವೀಕ್ಷಕರನ್ನು ನಿಯೋಜಿಸಲಾಗುತ್ತದೆ. ಆದರೆ ಪಾಲಿಕೆಯ ಸಾಮಾನ್ಯ ಸಭೆಗೆ ವೀಕ್ಷಕರನ್ನು ಕಳುಹಿಸಿರುವುದರ ಉದ್ದೇಶವೇನು ಎಂದು ಸದಸ್ಯರು ಪ್ರಶ್ನಿಸಿದರು.
ಈ ವೇಳೆ ಪಾಲಿಕೆ ಆಯುಕ್ತರು ಸ್ಪಷ್ಟನೆ ನೀಡಿದ್ದು, ಸೆಪ್ಟೆಂಬರ್ 24ರಂದು ಪೌರಾಡಳಿತ ನಿರ್ದೇಶಕರು ನೀಡಿದ ಸೂಚನೆಯಂತೆ ಜಿಲ್ಲಾಧಿಕಾರಿಗಳ ಮೂಲಕ ವೀಕ್ಷಕರನ್ನು ಕಳುಹಿಸಲಾಗಿದೆ ಎಂದು ತಿಳಿಸಿದರು.
ಆದರೆ ಆಯುಕ್ತರ ಸ್ಪಷ್ಟನೆಗೆ ತೃಪ್ತರಾಗದ ಸದಸ್ಯರು, ಪಾಲಿಕೆಯಲ್ಲಿ ಸರ್ಕಾರದ ಹಸ್ತಕ್ಷೇಪ ಅಗತ್ಯವಾಗುವಂತಹ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಹಾಗಿದ್ದರೂ ವೀಕ್ಷಕರನ್ನು ನಿಯೋಜಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಈ ವಿಚಾರದಲ್ಲಿ ಉಪ ಮೇಯರ್ ಹನುಮಂತ ಕೊಂಗಾಳಿ ಕೂಡ ಮಧ್ಯಪ್ರವೇಶಿಸಿ, ಅಧಿಕಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಅಗತ್ಯವಿದ್ದರೆ ಈ ಕುರಿತು ರಾಜ್ಯಪಾಲರಿಗೆ ದೂರು ನೀಡುವ ಬಗ್ಗೆಯೂ ಚರ್ಚೆ ನಡೆಯಿತು.
ಪಾಲಿಕೆಯ ಕಾರ್ಯವೈಖರಿಯಲ್ಲಿ ಸರ್ಕಾರದ ನಿರ್ದೇಶನ ಅಗತ್ಯವಿದ್ದರೆ ಮಾತ್ರ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಸಾಮಾನ್ಯ ಸಭೆಗೆ ವೀಕ್ಷಕರನ್ನು ಕಳುಹಿಸಿರುವ ಕ್ರಮ ಸರಿಯಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಸ್ಪಷ್ಟನೆ ಕೇಳುವಂತೆ ಠರಾವು ಅಂಗೀಕರಿಸುವ ಪ್ರಸ್ತಾಪವೂ ನಡೆಯಿತು.
ಇದೇ ವೇಳೆ ಹಿರಿಯ ಕೆಎಎಸ್ ಅಧಿಕಾರಿಯ ವಿರುದ್ಧ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ಕೆಲ ಸದಸ್ಯರು ಆಕ್ಷೇಪಿಸಿದರು. ಇದರಿಂದ ಪಾಲಿಕೆ ಹಾಗೂ ಸರ್ಕಾರದ ನಡುವೆ ಅನಗತ್ಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು.
ಚರ್ಚೆ ತೀವ್ರವಾಗುತ್ತಿದ್ದಂತೆ ಮೇಯರ್ ಮಧ್ಯಪ್ರವೇಶಿಸಿ, ಈ ವಿಚಾರದಲ್ಲಿ ಈಗಾಗಲೇ ರೂಲಿಂಗ್ ನೀಡಲಾಗಿದೆ. ಹೀಗಾಗಿ ವಿಷಯವನ್ನು ಇಲ್ಲಿಗೆ ಮುಕ್ತಾಯಗೊಳಿಸುವಂತೆ ಸೂಚಿಸಿದರು.
ಇದಕ್ಕೆ ಕೆಲ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, “ನೀವೇನು ನಮಗೆ ವಾರ್ನಿಂಗ್ ಮಾಡುತ್ತಿದ್ದೀರಾ? ನಾವು ಮಾತನಾಡಬಾರದೇ?” ಎಂದು ಪ್ರಶ್ನಿಸಿದರು. ಮೇಯರ್ ಸ್ಥಾನಕ್ಕೆ ತಕ್ಕಂತೆ ಗಂಭೀರತೆ ಹಾಗೂ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಮೈಕ್ ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಮೇಯರ್ ಅವರ ಮಾತು ಸ್ಪಷ್ಟವಾಗಿ ಕೇಳಿಸಲಿಲ್ಲ. ಹೀಗಾಗಿ ಮತ್ತೊಮ್ಮೆ ಕೇಳುವುದರಲ್ಲಿ ತಪ್ಪೇನಿದೆ ಎಂದು ಸದಸ್ಯರು ಪ್ರಶ್ನಿಸಿದರು. ಸಭೆಯಲ್ಲಿ ಕೆಳಗೆ ಕುಳಿತಿರುವ ಸದಸ್ಯರು ಮಾತನಾಡುವಾಗ ಮೇಯರ್ ಅವರು ಸ್ಪಷ್ಟವಾಗಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ವಿಷಯ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಎದ್ದು ನಿಂತರು. ಆಡಳಿತ ಪಕ್ಷ, ವಿರೋಧ ಪಕ್ಷದ ಸದಸ್ಯರು ಹಾಗೂ ಸರ್ಕಾರದ ಪ್ರತಿನಿಧಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಇದರಿಂದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



