*ಪತ್ನಿ ಜೊತೆ ಗಲಾಟೆ*: *ಆಸ್ಪತ್ರೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೋಗಿ*

ಪ್ರಗತಿವಾಹಿನಿ ಸುದ್ದಿ: ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಹಂತದಲ್ಲೇ ಏಕಾಏಕಿ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿದರೂ, ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ರಾಜೇಶ್ ಆರ್. ಶೆಟ್ಟಿ ಗಾಯಗೊಂಡ ವ್ಯಕ್ತಿ. ಪತ್ನಿ ಜೊತೆ ಜಗಳದ ಬಳಿಕ ವಿಷ ಸೇವಿಸಿದ್ದ ರಾಜೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಆಸ್ಪತ್ರೆ (ಕೆಎಂಸಿ)ಗೆ ದಾಖಲಿಸಲಾಗಿತ್ತು.
ವಿಷ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ರಾಜೇಶ್ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿದ್ದರಿಂದ ಡಿಸ್ಚಾರ್ಜ್‌ಗೆ ಸಿದ್ಧತೆ ನಡೆಸಲಾಗುತ್ತಿತ್ತು.
ಇಂದು ಆಸ್ಪತ್ರೆ ಸಿಬ್ಬಂದಿ ಜೊತೆ ವಾಕಿಂಗ್‌ಗೆ ತೆರಳುವುದಾಗಿ ಹೇಳಿ ರಾಜೇಶ್ ಕೊಠಡಿಯಿಂದ ಹೊರಬಂದಿದ್ದಾರೆ. ಬಳಿಕ ಏಕಾಏಕಿ ಆಸ್ಪತ್ರೆಯ ಕಿಟಕಿಯತ್ತ ತೆರಳಿ ಸುರಕ್ಷತೆಗಾಗಿ ಅಳವಡಿಸಿದ್ದ ಜಾಲರಿಯನ್ನು ಹರಿದು ಹೊರಬಂದಿದ್ದಾರೆ.
ನಂತರ ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿದಿದ್ದು, ಭಾರೀ ರಭಸದಿಂದ ನೆಲಕ್ಕೆ ಬಿದ್ದ ಪರಿಣಾಮ ದೇಹದ ಹಲವು ಭಾಗಗಳಿಗೆ ತೀವ್ರ ಗಾಯಗಳಾಗಿವೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




