CrimeKannada NewsKarnataka News

*ಬೆಂಗಳೂರಿನಲ್ಲಿ ಮಳೆ ಅವಾಂತರ*: *ಚಿತ್ರಮಂದಿರದ ಮೇಲ್ಛಾವಣಿ ಕುಸಿದು ಪ್ರೇಕ್ಷಕನಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಇಂದು ಸಂಜೆ ವೇಳೆಗೆ ಸುರಿದ ಭಾರೀ ಮಳೆ ಬೆಂಗಳೂರಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ನಗರದ ಹಲವು ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇದೇ ವೇಳೆ ಚಿತ್ರಮಂದಿರವೊಂದರಲ್ಲಿ ಮೇಲ್ಛಾವಣಿಯ ಭಾಗ ಕುಸಿದು ಪ್ರೇಕ್ಷಕನಿಗೆ ಗಾಯವಾಗಿರುವ ಘಟನೆ ನಡೆದಿದೆ.

ಏರ್‌ಪೋರ್ಟ್ ರಸ್ತೆ, ಹೆಬ್ಬಾಳ, ರಾಜಾಜಿನಗರ, ಮೆಜೆಸ್ಟಿಕ್ ಹಾಗೂ ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. ಮಳೆ ನೀರು ರಸ್ತೆಯಲ್ಲಿ ನಿಂತ ಪರಿಣಾಮ ಹಲವು ಕಡೆ ಸಂಚಾರ ನಿಧಾನಗೊಂಡಿದ್ದು, ಕೆಲವೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದೆ.

ಪೀಣ್ಯ-ದಾಸರಹಳ್ಳಿ ಸಮೀಪದ ಭಾರತಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದ ವೇಳೆ ಮೇಲ್ಛಾವಣಿಯ ಒಂದು ಭಾಗ ಏಕಾಏಕಿ ಕುಸಿದು ಪ್ರೇಕ್ಷಕನ ಮೇಲೆ ಬಿದ್ದಿದೆ. ಘಟನೆಯಲ್ಲಿ ಪ್ರೇಕ್ಷಕನ ತಲೆಗೆ ತೀವ್ರ ಪೆಟ್ಟಾಗಿದೆ.

ಅವಘಡ ಸಂಭವಿಸುತ್ತಿದ್ದಂತೆ ಚಿತ್ರಮಂದಿರದ ಸಿಬ್ಬಂದಿ ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ. ಗಾಯಗೊಂಡ ಪ್ರೇಕ್ಷಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಇನ್ನು ಮಳೆಯ ಅಬ್ಬರಕ್ಕೆ ನಗರದ ಹಲವು ರಸ್ತೆಗಳು ಕೆರೆಯಂತಾಗಿವೆ. ಬಳಗೆರೆ ರಸ್ತೆಗೆ ಸಂಪರ್ಕ ಕಲ್ಪಿಸುವ ಜಂಕ್ಷನ್ ಬಳಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ವೈಟ್‌ಫೀಲ್ಡ್‌ನ ವಿಬ್‌ಗಯಾರ್ ರಸ್ತೆಯಲ್ಲೂ ಮಳೆ ನೀರು ನಿಂತು ರಸ್ತೆಯೇ ಜಲಾವೃತವಾಗಿದೆ. ನೀರು ನಿಂತ ಪರಿಣಾಮ ಕೆಲವು ವಾಹನಗಳು ಕೆಟ್ಟು ರಸ್ತೆಯಲ್ಲೇ ನಿಂತಿರುವುದು ಕಂಡುಬಂದಿದೆ.

ಸಹಕಾರ ನಗರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಮೋರಿ ಬ್ಲಾಕ್ ಆಗಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ನಿಂತಿದ್ದು, ಸ್ಥಳೀಯರು ಹಾಗೂ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

ಭಾರೀ ಮಳೆಯ ಹಿನ್ನೆಲೆಯಲ್ಲಿ ನಗರದ ಹಲವು ಭಾಗಗಳಲ್ಲಿ ಸಂಚಾರದ ವೇಗ ಕುಂಠಿತಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ ಪರಿಣಾಮ ಕೆಲವೆಡೆ ಟ್ರಾಫಿಕ್ ದಟ್ಟಣೆ ಕಂಡುಬಂದಿದೆ.

ಬೆಂಗಳೂರಿನಲ್ಲಿ ಮತ್ತಷ್ಟು ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಹಾಗೂ ಭಾರೀ ಮಳೆಯ ಸಂದರ್ಭದಲ್ಲಿ ಅನಗತ್ಯ ಪ್ರಯಾಣ ತಪ್ಪಿಸುವಂತೆ ಸೂಚಿಸಿದ್ದಾರೆ. ನಗರದ ಸಂಚಾರ ಸ್ಥಿತಿಗತಿ ತಿಳಿದುಕೊಳ್ಳಲು ಬಿಟಿಪಿ ಅಸ್ತ್ರಂ ಆ್ಯಪ್ ಹಾಗೂ ಸಂಚಾರ ಪೊಲೀಸರ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆಯುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button