Latest

*ಪ್ರದೋಷ್‌ಗೆ ಟಿವಿ, ಕ್ಯಾಂಟೀನ್, ಬೇಕರಿ ಬಳಕೆ ಕುರಿತು ಕ್ರಮಕ್ಕೆ ಕೋರ್ಟ್​ ಸೂಚನೆ*

ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್‌ಗೆ ಇದೀಗ ಜೈಲಿನಲ್ಲಿ ಇತರೆ ಕೈದಿಗಳಿಗೆ ಸಿಗುವ ಕೆಲವು ಸೌಲಭ್ಯಗಳನ್ನು ಪಡೆಯಲು ನ್ಯಾಯಾಲಯ ಅವಕಾಶ ನೀಡಿದೆ. ಕುಟುಂಬಸ್ಥರೊಂದಿಗೆ ವಿಡಿಯೋ ಕರೆ, ಜೈಲು ಕ್ಯಾಂಟೀನ್ ಮತ್ತು ಬೇಕರಿ ಬಳಕೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಪುರಸ್ಕರಿಸಿದೆ.

ಮೂರನೇ ದಿನವೂ ಪ್ರದೋಷ್ ನ್ಯಾಯಾಲಯದ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ನಡೆದ ಬೆಳವಣಿಗೆಗಳು, ಶವ ವಿಲೇವಾರಿ ಹಾಗೂ ಸರೆಂಡರ್ ಆದ ಆರೋಪಿಗಳ ಪಾತ್ರ ಸೇರಿದಂತೆ ಹಲವು ಅಂಶಗಳ ಕುರಿತು ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಪ್ರದೋಷ್‌ರನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಈ ನಡುವೆ ಇತರೆ ಕೈದಿಗಳಂತೆ ಕುಟುಂಬಸ್ಥರೊಂದಿಗೆ ಸಂಪರ್ಕ ಸಾಧಿಸಲು ಇ-ಮುಕಾಲತ್ ಹಾಗೂ ಪ್ರಿಸನ್ ಕಾಲಿಂಗ್ ಸಿಸ್ಟಂ ಸೌಲಭ್ಯ ಕಲ್ಪಿಸುವಂತೆ ಪ್ರದೋಷ್ ಮನವಿ ಮಾಡಿದ್ದರು. ಜೈಲಿನ ಕ್ಯಾಂಟೀನ್ ಮತ್ತು ಬೇಕರಿ ಬಳಸಲು ಅವಕಾಶ ನೀಡಬೇಕು ಹಾಗೂ ಈ ಹಿಂದೆ ನೀಡಲಾಗಿದ್ದ ಟೆಲಿವಿಷನ್ ಸೆಟ್ ಒದಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಜೈಲು ಕೈಪಿಡಿಯ ನಿಯಮಗಳ ಅನ್ವಯ ಪ್ರದೋಷ್‌ಗೂ ಇತರೆ ಕೈದಿಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದೆ. ಲಾಕಪ್‌ನಲ್ಲಿರುವ ಸಂದರ್ಭದಲ್ಲಿ ಟಿವಿ ಸೌಲಭ್ಯ ನೀಡುವಂತೆಯೂ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ನ್ಯಾಯಾಲಯದ ಆದೇಶವನ್ನು ಇ-ಮೇಲ್ ಮೂಲಕ ಜೈಲು ಅಧಿಕಾರಿಗಳಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ನಿಯಮಾನುಸಾರ ಲಭ್ಯವಿರುವ ಸೌಲಭ್ಯಗಳನ್ನು ಪ್ರದೋಷ್‌ಗೂ ನೀಡಬೇಕೆಂದು ನ್ಯಾಯಾಲಯ ತಿಳಿಸಿದೆ.

ಇನ್ನು ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಇನ್‌ಕ್ಯಾಮರಾ ಪ್ರೊಸೀಡಿಂಗ್ಸ್ ಮೂಲಕ ನಡೆಸಲಾಯಿತು. ಕಳೆದ ಎರಡು ದಿನಗಳಿಂದ ಪ್ರಕರಣದ ಕೋರ್ಟ್ ಕಲಾಪವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡದಂತೆ ಆದೇಶವಿದ್ದ ಹಿನ್ನೆಲೆಯಲ್ಲಿ, ಇಂದು ಪ್ರಕರಣದ ಆನ್‌ಲೈನ್ ವೀಕ್ಷಣೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು.

ವಿಡಿಯೋ ಕಾನ್ಫರೆನ್ಸ್ ಸಂಪರ್ಕಕ್ಕೂ ನಿರ್ಬಂಧ ವಿಧಿಸಿ, ಪ್ರದೋಷ್ ಅವರ ಹೇಳಿಕೆಯನ್ನು ನ್ಯಾಯಾಲಯದ ಒಳಾಂಗಣ ವಿಚಾರಣೆ ಮೂಲಕ ದಾಖಲಿಸಿಕೊಳ್ಳಲಾಗಿದೆ. ಮುಂದಿನ ವಿಚಾರಣೆಯಲ್ಲಿ ಮತ್ತಷ್ಟು ಅಂಶಗಳ ಕುರಿತು ಹೇಳಿಕೆ ದಾಖಲಿಸುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button