*ಬಿಜೆಪಿಯವರ ತಂತ್ರ, ಕುತಂತ್ರ ಎಲ್ಲ ಬಿಚ್ಚಿಡ್ತೀನಿ: ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ವಿಚಾರವಾಗಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಹೆಸರು ಡಿಲೀಟ್ ಮಾಡುವ ವಿಚಾರದಲ್ಲಿ ಬಿಜೆಪಿಯವರ ತಂತ್ರ, ಕುತಂತ್ರ ಎಲ್ಲವನ್ನೂ ಮುಂದಿನ ದಿನಗಳಲ್ಲಿ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ. ಚುನಾವಣಾ ಆಯೋಗಕ್ಕೆ ಈ ಬಗ್ಗೆ ಅಗತ್ಯ ಮಾಹಿತಿಯನ್ನು ಈಗಾಗಲೇ ಮನದಟ್ಟು ಮಾಡಿದ್ದೇನೆ ಎಂದಿದ್ದಾರೆ.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದರು.
54 ಲಕ್ಷ ಮತಗಳನ್ನು ಡಿಲೀಟ್ ಮಾಡುವ ಕುರಿತ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಚುನಾವಣಾ ಆಯೋಗ ದಡ್ಡರಲ್ಲ. ತಮ್ಮ ವಿರುದ್ಧ ದೂರು ನೀಡುವುದಾದರೆ ನೀಡಲಿ, ಸಂತೋಷ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಸಾಬೀತುಪಡಿಸುವಂತೆ ಸವಾಲು ಹಾಕಿರುವ ಕುರಿತು ಪ್ರತಿಕ್ರಿಯಿಸಿ, “ಬಹಳ ಸಂತೋಷ, ಮಾತಾಡೋಣ. ಆದರೆ ಈ ಜಾಗದಲ್ಲಿ ಬೇಡ” ಎಂದರು.
ಎಸ್ಐಆರ್ನಲ್ಲಿ ಎಷ್ಟು ಮತಗಳ ಡಿಲೀಟ್ಗೆ ಅರ್ಜಿ ಸಲ್ಲಿಸಲಾಗಿದೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲವೂ ಹೊರಬರಲಿದೆ. ಒಂದು, ಹತ್ತು ಅಥವಾ ಐವತ್ತು ಲಕ್ಷ ಇರಲಿ, ತಂತ್ರ-ಮಂತ್ರದ ಸಂಪೂರ್ಣ ವಿವರಗಳು ಬಿಚ್ಚಿಡಲಾಗುವುದು ಎಂದು ಹೇಳಿದರು.
ತಮ್ಮ ವಿರುದ್ಧ ಬಿಜೆಪಿಯಿಂದ ಪೊಲೀಸರಿಗೆ ದೂರು ನೀಡಿರುವ ವಿಚಾರಕ್ಕೂ ಪ್ರತಿಕ್ರಿಯಿಸಿ, “ಬಹಳ ಸಂತೋಷ, ಇನ್ನೂ ಮಾಡಬೇಕು” ಎಂದು ಹೇಳಿದರು. ವಿರೋಧ ಪಕ್ಷದವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಚುನಾವಣಾ ಆಯೋಗದ ಕಚೇರಿ ಎದುರು ಧರಣಿ ನಡೆಸಿದ್ದನ್ನು ಸಮರ್ಥಿಸಿಕೊಂಡು, ತಾವು ಕಚೇರಿಯಲ್ಲೇ ಕುಳಿತಿದ್ದೆ, ರಸ್ತೆಯಲ್ಲಿ ಕುಳಿತಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಆಯೋಗಕ್ಕೆ ಅಗತ್ಯ ಮಾಹಿತಿ ನೀಡಿದ್ದೇನೆ. ಹೋರಾಟದ ಕಾರಣದಿಂದಲೇ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ನಾಯಕರ ಮತಗಳನ್ನೂ ರಕ್ಷಿಸಬೇಕಿದೆ. ಎಚ್.ಡಿ. ಕುಮಾರಸ್ವಾಮಿ ಅವರ ಮತವನ್ನೂ ರಕ್ಷಿಸಬೇಕಲ್ಲವೇ? ಇದೇ ಕಾರಣಕ್ಕೆ ಹೋರಾಟ ನಡೆಸಿದ್ದೇನೆ ಎಂದು ತಿಳಿಸಿದರು.
ಎಸ್ಐಆರ್ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಶಿವಕುಮಾರ್, 24 ಸಾವಿರ ಮತಗಳ ಡಿಲೀಟ್ಗೆ ಮಾತ್ರ ಅರ್ಜಿ ಸಲ್ಲಿಸಿದ್ದೇವೆ ಎಂದು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದರು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಕುಟುಂಬದ ಮತ ಸೇರಿದಂತೆ ಬಿಜೆಪಿ-ಜೆಡಿಎಸ್ ಸೇರಿದಂತೆ ಎಲ್ಲರ ಮತಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದ ಜನಪ್ರತಿನಿಧಿಯಾಗಿ ಚುನಾವಣಾ ಆಯೋಗಕ್ಕೆ ತೆರಳಿ ಈ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ತಮ್ಮ ವಿರುದ್ಧ ದೂರು ನೀಡುವುದಾದರೆ ನೀಡಲಿ ಎಂದು ಮತ್ತೊಮ್ಮೆ ಸವಾಲು ಹಾಕಿದರು. ಏತನ್ಮಧ್ಯೆ, ಎಸ್ಐಆರ್ ಪ್ರಕ್ರಿಯೆಯಲ್ಲಿ ನಕಲಿ ಅಥವಾ ತಪ್ಪು ಮಾಹಿತಿಯೊಂದಿಗೆ ಸಲ್ಲಿಸಲಾದ ಫಾರ್ಮ್-7 ಅರ್ಜಿಗಳ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸೂಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



