*ಫ್ಲೈದುಬೈ ದಾಳಿ ಬೆನ್ನಲ್ಲೇ ಅಲ್ಖೈದಾ ಶಾಕಿಂಗ್ ಕರೆ*: *ಅಮೆರಿಕ, ಇಸ್ರೇಲ್ ವಿಮಾನಗಳೇ ಟಾರ್ಗೆಟ್?*

ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್ಪಿಟ್ ದಾಳಿ ಪ್ರಕರಣದ ಬೆನ್ನಲ್ಲೇ ಅಲ್ಖೈದಾ ಬೆಂಬಲಿತ ಪ್ರಕಟಣೆಯೊಂದು ಮತ್ತಷ್ಟು ಆತಂಕಕಾರಿ ಕರೆ ನೀಡಿರುವುದು ವರದಿಯಾಗಿದೆ. ಅಮೆರಿಕನ್ನರು ಮತ್ತು ಇಸ್ರೇಲಿಗಳು ಪ್ರಯಾಣಿಸುವ ವಿಮಾನಗಳನ್ನು ಇದೇ ರೀತಿಯಲ್ಲಿ ಗುರಿಯಾಗಿಸಿ ದಾಳಿ ನಡೆಸುವಂತೆ ಪ್ರಚೋದಿಸಲಾಗಿದೆ.
‘ಅಲ್-ಬಯಾನ್’ ಎಂಬ ಅರೇಬಿಕ್ ವಾರಪತ್ರಿಕೆಯ ಇತ್ತೀಚಿನ ಸಂಚಿಕೆಯಲ್ಲಿ ಈ ಸಂದೇಶ ಪ್ರಕಟವಾಗಿದೆ. ಸೆಪ್ಟೆಂಬರ್ 30ರಂದು ನಡೆದ ಫ್ಲೈದುಬೈ FZ1073 ವಿಮಾನದ ಕಾಕ್ಪಿಟ್ ದಾಳಿ ಹಾಗೂ 9/11 ದಾಳಿಯನ್ನು ಉಲ್ಲೇಖಿಸಿ, ಇದೇ ಮಾದರಿಯ ದಾಳಿಗಳಿಗೆ ಕರೆ ನೀಡಲಾಗಿದೆ.
“ಯುದ್ಧ ಇನ್ನೂ ಮುಗಿದಿಲ್ಲ” ಎಂಬ ಸಂದೇಶದೊಂದಿಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಮತ್ತಷ್ಟು ದಾಳಿಗಳಿಗೆ ಪ್ರಚೋದನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬರಹವನ್ನು ಅಲ್ಖೈದಾ ನಂಟಿನ ಟೆಲಿಗ್ರಾಂ ಚಾನೆಲ್ಗಳಲ್ಲಿ ಹಂಚಿಕೊಂಡ ಬಳಿಕ ತೆಗೆದುಹಾಕಲಾಗಿದೆ ಎನ್ನಲಾಗಿದೆ.
ಈ ಬೆಳವಣಿಗೆ ಸೆಪ್ಟೆಂಬರ್ 30ರಂದು ನಡೆದ ಫ್ಲೈದುಬೈ ವಿಮಾನದ ದಾಳಿ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ನಡೆದಿದೆ. ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ FZ1073 ವಿಮಾನದಲ್ಲಿ ಒಮಾನ್ನ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ಕಾಕ್ಪಿಟ್ನಲ್ಲೇ ದಾಳಿ ನಡೆಸಿದ್ದ.
ಕಾಕ್ಪಿಟ್ನ ತುರ್ತು ಕ್ರ್ಯಾಶ್ ಆಕ್ಸ್ ಬಳಸಿ ಸ್ಮಿತ್ ಮೇಲೆ ದಾಳಿ ನಡೆಸಿದ ಬಳಿಕ ವಿಮಾನದ ನಿಯಂತ್ರಣವನ್ನು ವಶಪಡಿಸಿಕೊಂಡು ವಿಮಾನವನ್ನು ಪತನಗೊಳಿಸಲು ಯತ್ನಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ದಾಳಿಯಿಂದ ಗಾಯಗೊಂಡಿದ್ದರೂ ಸ್ಮಿತ್ ಕಾಕ್ಪಿಟ್ ಬಾಗಿಲು ತೆರೆದು ಪ್ರಯಾಣಿಕರು ಮತ್ತು ಸಿಬ್ಬಂದಿಗೆ ಒಳಬರಲು ಅವಕಾಶ ಮಾಡಿಕೊಟ್ಟಿದ್ದರು.
ಬಳಿಕ ಪ್ರಯಾಣಿಕರು ಹಾಗೂ ಇತರ ಸಿಬ್ಬಂದಿ ಕಾಕ್ಪಿಟ್ಗೆ ಪ್ರವೇಶಿಸಿ ಸಹ-ಪೈಲಟ್ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇತರ ಪೈಲಟ್ಗಳ ನೆರವಿನಿಂದ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದರು.
ಸದ್ಯ ಅಲ್-ಹಮ್ಮಾಮಿ ಯುಎಇ ವಶದಲ್ಲಿದ್ದು, ದಾಳಿಯ ಉದ್ದೇಶ, ಹಿನ್ನೆಲೆ ಹಾಗೂ ಸಾಧ್ಯ ಉಗ್ರ ಸಂಘಟನೆಗಳ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ. ಯುಎಇ ಅಧಿಕಾರಿಗಳು ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ವರ್ಗೀಕರಿಸಿರುವುದಾಗಿ ವರದಿಯಾಗಿದೆ. ಇದೀಗ ಅಲ್ಖೈದಾ ಬೆಂಬಲಿತ ಪ್ರಕಟಣೆಯಲ್ಲಿ ಫ್ಲೈದುಬೈ ಘಟನೆಗೆ ಉಲ್ಲೇಖ ನೀಡಿ ಇಂತಹ ದಾಳಿಗಳಿಗೆ ಕರೆ ನೀಡಿರುವುದು ಭದ್ರತಾ ಸಂಸ್ಥೆಗಳ ಗಮನ ಸೆಳೆದಿದೆ. ಆದರೆ ಈ ಪ್ರಕಟಣೆಯು ಸಂಘಟನೆಯ ಅಧಿಕೃತ ನೇರ ಹೇಳಿಕೆಯೇ ಎಂಬುದೂ ಸೇರಿದಂತೆ ಹಲವು ವಿವರಗಳ ಕುರಿತು ತನಿಖೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



