*ಸಾಯಿಬಾಬಾ ಭಕ್ತರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ-ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಬಸ್: ಇಲ್ಲಿದೆ ವೇಳಾಪಟ್ಟಿ*

ರಿಯಾಯಿತಿ ಕೂಡ ಲಭ್ಯ
ಪ್ರಗತಿವಾಹಿನಿ ಸುದ್ದಿ: ಶಿರಡಿ ಶ್ರೀ ಸಾಯಿಬಾಬಾ ದರ್ಶನಕ್ಕೆ ಹೋಗಿಬರುವ ಭಕ್ತರು ಹಾಗೂ ಇತರೆ ಪ್ರಯಾಣಿಕರಿಗೆ ಇಲ್ಲಿದೆ ಸಿಹಿಸುದ್ದಿ. ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ ಹಾಗೂ ಶಿರಡಿ ನಡುವೆ ಪ್ರತಿದಿನ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ.
ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ. ಮಹಾರಾಷ್ಟ್ರದ ಪ್ರಮುಖ ಧಾರ್ಮಿಕ ಕ್ಷೇತ್ರ ಶ್ರೀ ಸಾಯಿಬಾಬಾ ದರ್ಶನಕ್ಕಾಗಿ ಭಕ್ತರು, ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ ಮತ್ತಿತರ ಕೆಲಸ ಕಾರ್ಯಗಳಿಗಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಪ್ರಮುಖ ಸ್ಥಳಗಳಾದ ಪುಣೆ, ಪಿಂಪ್ರಿ, ಅಹ್ಮದನಗರ, ಶಿರಡಿ, ನಾಸಿಕ್, ಔರಂಗಾಬಾದ್ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಾರೆ. ಅವರ ಅನುಕೂಲಕ್ಕಾಗಿ ಧಾರವಾಡ, ಬೆಳಗಾವಿ, ಕೊಲ್ಹಾಪುರ, ಪುಣೆ, ಪಿಂಪ್ರಿ, ಅಹ್ಮದನಗರ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಶಿರಡಿ ನಡುವೆ ಎರಡು ನೂತನ ರಾಜರಥ ಎಸಿ ಸ್ಲೀಪರ್ ಬಸ್ಗಳ ಸಂಚಾರವನ್ನು ಆರಂಭಿಸಲಾಗಿದೆ.
ಪ್ರತಿದಿನ ರಾತ್ರಿ ಒಂದು ಬಸ್ ಹುಬ್ಬಳ್ಳಿಯಿಂದ ಶಿರಡಿಗೆ ಹಾಗೂ ಇನ್ನೊಂದು ಬಸ್ ಶಿರಡಿಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಲಿವೆ.
ವೇಳಾಪಟ್ಟಿ:
ಹುಬ್ಬಳ್ಳಿಯಿಂದ ಶಿರಡಿಗೆ ಹೋಗುವ ಬಸ್ ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣದಿಂದ ಪ್ರತಿದಿನ ರಾತ್ರಿ 8ಕ್ಕೆ ಹೊರಡುತ್ತದೆ. ಹೊಸೂರು ಬಸ್ ನಿಲ್ದಾಣದಿಂದ 8.15ಕ್ಕೆ, ಧಾರವಾಡ ಹೊಸ ಬಸ್ ನಿಲ್ದಾಣದಿಂದ 9ಕ್ಕೆ ಹಾಗೂ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ 10.15ಕ್ಕೆ ಹೊರಡುತ್ತದೆ. ಪುಣೆ ಸ್ವಾರ್ ಗೇಟ್ ಬಸ್ ನಿಲ್ದಾಣಕ್ಕೆ ಮರುದಿನ ಬೆಳಗ್ಗೆ 5ಕ್ಕೆ, ಅಹ್ಮದನಗರಕ್ಕೆ 8 ಹಾಗೂ ಶಿರಡಿಗೆ 9.30ಕ್ಕೆ ತಲುಪುತ್ತದೆ.
ಶಿರಡಿಯಿಂದ ಹುಬ್ಬಳ್ಳಿಗೆ ಬರುವ ಬಸ್ ಶಿರಡಿ ಬಸ್ ನಿಲ್ದಾಣದಿಂದ ಸಂಜೆ 6.35ಕ್ಕೆ ಹೊರಡುತ್ತದೆ. ಅಹ್ಮದನಗರದ ತಾರಕಪುರ ಬಸ್ ನಿಲ್ದಾಣದಿಂದ 8.35ಕ್ಕೆ, ಹಾಗೂ ಪುಣೆ ಸ್ವಾರಗೇಟ್ ಬಸ್ ನಿಲ್ದಾಣದಿಂದ ರಾತ್ರಿ 11.20ಕ್ಕೆ ಹೊರಡುತ್ತದೆ. ಬೆಳಗಾವಿಗೆ ಮರುದಿನ ಬೆಳಗ್ಗೆ 5.05, ಧಾರವಾಡಕ್ಕೆ 6.20 ಹಾಗೂ ಹುಬ್ಬಳ್ಳಿಗೆ 7ಕ್ಕೆ ಆಗಮಿಸುತ್ತದೆ.
ಪ್ರಯಾಣ ದರ:
ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ಹುಬ್ಬಳ್ಳಿಯಿಂದ ಪುಣೆಗೆ 1,223 ರೂ. ಹಾಗೂ ಹುಬ್ಬಳ್ಳಿಯಿಂದ ಶಿರಡಿಗೆ 1,822 ರೂ. ನಿಗದಿಪಡಿಸಲಾಗಿದೆ.
ಮುಂಗಡ ಬುಕ್ಕಿಂಗ್:
ಸಾರ್ವಜನಿಕರು www.ksrtc.in ವೆಬ್ಸೈಟ್, KSRTC Mobile App, ವಾಟ್ಸ್ಆ್ಯಪ್ ಸಂಖ್ಯೆ: 6364940880, ಹೊಸೂರು ಬಸ್ ನಿಲ್ದಾಣ, ಗೋಕುಲ ರಸ್ತೆ ಕೇಂದ್ರ ಬಸ್ ನಿಲ್ದಾಣ ಹಾಗೂ ಇತರೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ.
ರಿಯಾಯಿತಿ:
ಒಂದೇ ಟಿಕೆಟ್ನಲ್ಲಿ 4 ಅಥವಾ ಹೆಚ್ಚು ಸೀಟುಗಳನ್ನು ಕಾಯ್ದಿರಿಸಿದರೆ ಪ್ರಯಾಣದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ಟಿಕೆಟ್ ಖರೀದಿಸಿದರೆ ಹಿಂದಿರುಗುವ ಪ್ರಯಾಣ ದರದಲ್ಲಿ ಶೇಕಡಾ 10ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಈ ನೂತನ ಬಸ್ಗಳಿಂದ ಧಾರವಾಡ, ಬೆಳಗಾವಿ ಜಿಲ್ಲೆಗಳ ಸಾರ್ವಜನಿಕರು ಹಾಗೂ ಮಹಾರಾಷ್ಟ್ರ ರಾಜ್ಯದ ಪುಣೆ, ಶಿರಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಮತ್ತು ಇತರರಿಗೆ ಅನುಕೂಲವಾಗಲಿದೆ.
ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ನೆರೆಯ ರಾಜ್ಯಗಳ ಇತರೆ ಪ್ರಮುಖ ಸ್ಥಳಗಳಿಗೆ ಹುಬ್ಬಳ್ಳಿಯಿಂದ ನೇರವಾಗಿ ಪ್ರತಿಷ್ಠಿತ ಬಸ್ಗಳ ಸಂಚಾರ ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




