CrimeKannada NewsKarnataka NewsNationalTravel

*ಹೆಲಿಕಾಪ್ಟರ್‌ನಿಂದ ಪರಿಹಾರ ಪ್ಯಾಕೆಟ್‌ ಎಸೆತ: ಪ್ಯಾಕೆಟ್ ತಲೆಗೆ ಬಡಿದು ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರವಾಹ ಪೀಡಿತರಿಗೆ ಪರಿಹಾರ ಸಾಮಗ್ರಿ ವಿತರಿಸುತ್ತಿದ್ದ ವೇಳೆ ಹೆಲಿಕಾಪ್ಟರ್‌ನಿಂದ ಕೆಳಗೆ ಬಿದ್ದ ಪ್ಯಾಕೆಟ್ ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. 

ಬಿಹಾರದ ಸಾರಣ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 58 ವರ್ಷದ ಅನಿಲ್ ಕುಮಾರ್ ಸಿಂಗ್ ಮೃತಪಟ್ಟಿದ್ದಾರೆ. ಅಮೌರ್ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಶುರಾಂಪುರ ಗ್ರಾಮದ ಬಳಿ ಇರುವ ಪರಿಹಾರ ಶಿಬಿರದ ಸಮೀಪ ಹೆಲಿಕಾಪ್ಟರ್ ಮೂಲಕ ಪರಿಹಾರ ಸಾಮಗ್ರಿಗಳ ಪ್ಯಾಕೆಟ್‌ಗಳನ್ನು ಕೆಳಗೆ ಹಾಕಲಾಗುತ್ತಿತ್ತು. 

ಈ ವೇಳೆ ಪ್ಯಾಕೆಟ್‌ವೊಂದು ಅನಿಲ್ ಕುಮಾರ್ ಸಿಂಗ್ ಅವರ ತಲೆಗೆ ಬಡಿದ ಪರಿಣಾಮ ಅವರು ಮೃತಪಟ್ಟಿರಬಹುದು ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಮೃತರ ತಲೆ ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಅಮೌರ್ ಠಾಣಾಧಿಕಾರಿ ವಿಮಲೇಶ್ ಕುಮಾರ್ ತಿಳಿಸಿದ್ದಾರೆ. ಗ್ರಾಮಸ್ಥರು ಮಾತ್ರ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಡಿದು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೇ ವೇಳೆ, ಅದೇ ಪ್ರದೇಶದಲ್ಲಿ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಿದ ಪರಿಣಾಮ ಉಂಟಾದ ಗಾಳಿಯ ಒತ್ತಡಕ್ಕೆ ಟಿನ್ ಶೆಡ್‌ವೊಂದು ಹಾರಿ ಮಹಿಳೆಯೊಬ್ಬರ ಕಾಲಿಗೆ ಬಡಿದಿದೆ. 

ಘಟನೆಯಲ್ಲಿ ಮಹಿಳೆಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದು, ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೀಗಾಗಿ, ಅನಿಲ್ ಕುಮಾರ್ ಸಿಂಗ್ ಅವರ ಸಾವು ನಿಜವಾಗಿಯೂ ಹೆಲಿಕಾಪ್ಟರ್‌ನಿಂದ ಬಿದ್ದ ಪರಿಹಾರ ಪ್ಯಾಕೆಟ್‌ನಿಂದಲೇ ಸಂಭವಿಸಿದೆಯೇ ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button