Kannada NewsKarnataka NewsLatestSports

*ಪ್ರೇಮಾನಂದ ಮಹಾರಾಜ್ ಆಶ್ರಮಕ್ಕೆ ಹೋಗಲು ಕೊಹ್ಲಿಗೆ ₹5 ಕೋಟಿ?*

ಪ್ರಗತಿವಾಹಿನಿ ಸುದ್ದಿ: ಪ್ರೇಮಾನಂದ ಮಹಾರಾಜ್ ಅವರ ವೃಂದಾವನ ಆಶ್ರಮಕ್ಕೆ ಭೇಟಿ ನೀಡಲು ವಿರಾಟ್ ಕೊಹ್ಲಿಗೆ ₹5 ಕೋಟಿ ನೀಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಈ ಆರೋಪವನ್ನು ಕೊಹ್ಲಿ ಅವರ ಅಧಿಕೃತ ವಕ್ತಾರರು ತಳ್ಳಿ ಹಾಕಿದ್ದು, ಇದು ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ವಾಸ್ತವಾಂಶಗಳಿಗೆ ವಿರುದ್ಧ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರೇಮಾನಂದ ಮಹಾರಾಜ್ ಅವರನ್ನು ಹಲವು ಬಾರಿ ಭೇಟಿಯಾಗಿದ್ದಾರೆ. ಈ ಭೇಟಿಗಳು ಯಾವುದೇ ಹಣಕಾಸಿನ ವ್ಯವಹಾರದಿಂದ ನಡೆದಿಲ್ಲ. ವೈಯಕ್ತಿಕ ನಂಬಿಕೆ ಮತ್ತು ಗೌರವದ ಕಾರಣದಿಂದಲೇ ಕೊಹ್ಲಿ ಆಶ್ರಮಕ್ಕೆ ತೆರಳುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

₹5 ಕೋಟಿ ನೀಡಲಾಗಿದೆ ಎಂಬ ಆರೋಪವನ್ನು ಶ್ರೀಕೃಷ್ಣ ಜನ್ಮಭೂಮಿ ಸಂಘರ್ಷ ನ್ಯಾಸ್ ಅಧ್ಯಕ್ಷ ದಿನೇಶ್ ಶರ್ಮಾ, ಅಂದರೆ ‘ಫಲಹಾರಿ ಮಹಾರಾಜ್’ ಮಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬರೆದ ಪತ್ರದಲ್ಲಿ ಈ ಆರೋಪ ಮಾಡಲಾಗಿದೆ ಎಂದು ವರದಿಯಾಗಿದೆ.

ರಾಜಸ್ಥಾನ ಮೂಲದ ಖಾಸಗಿ ಕಂಪನಿ ಅಥವಾ ರಿಯಲ್ ಎಸ್ಟೇಟ್‌ ವಲಯಕ್ಕೆ ಸಂಬಂಧಿಸಿದವರು ಕೊಹ್ಲಿಯನ್ನು ಆಶ್ರಮಕ್ಕೆ ಕರೆತರಲು ಈ ಮೊತ್ತವನ್ನು ಖರ್ಚು ಮಾಡಿದ್ದಾರೆ ಎಂಬುದು ದಿನೇಶ್ ಶರ್ಮಾ ಮಾಡಿರುವ ಆರೋಪವಾಗಿದೆ. ಆದರೆ ಈ ಆರೋಪಕ್ಕೆ ಯಾವುದೇ ಸಾರ್ವಜನಿಕ ಪಾವತಿ ದಾಖಲೆ, ಒಪ್ಪಂದ ಅಥವಾ ಇತರ ಪುರಾವೆ ಸದ್ಯಕ್ಕೆ ಬಹಿರಂಗವಾಗಿಲ್ಲ.

ಕೊಹ್ಲಿ ಅವರ ವಕ್ತಾರರು ಆರೋಪವನ್ನು ತೀವ್ರವಾಗಿ ತಳ್ಳಿಹಾಕಿದ್ದು, ಇಂತಹ ಹೇಳಿಕೆಗಳನ್ನು ವರದಿ ಮಾಡುವ ಮೊದಲು ಮಾಧ್ಯಮಗಳು ವಾಸ್ತವಾಂಶ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದಾರೆ. ಹಣದ ವ್ಯವಹಾರ ನಡೆದಿರುವುದನ್ನು ಕೊಹ್ಲಿ ತಂಡ ಸ್ಪಷ್ಟವಾಗಿ ನಿರಾಕರಿಸಿದೆ.

ಕೊಹ್ಲಿ ಹಾಗೂ ಅನುಷ್ಕಾ 2023ರ ಜನವರಿ 4ರಂದು ಮೊದಲ ಬಾರಿಗೆ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಬಳಿಕವೂ ಹಲವು ಸಂದರ್ಭಗಳಲ್ಲಿ ದಂಪತಿ ಆಶ್ರಮಕ್ಕೆ ತೆರಳಿ ಮಹಾರಾಜ್ ಅವರ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಗಳ ವೇಳೆ ಜೀವನ, ಯಶಸ್ಸು, ವಿನಯ ಮತ್ತು ಆಧ್ಯಾತ್ಮಿಕತೆಯ ಕುರಿತು ಪ್ರೇಮಾನಂದ ಮಹಾರಾಜ್ ದಂಪತಿಗೆ ಸಲಹೆ ನೀಡಿರುವ ವಿಡಿಯೋಗಳು ಕೂಡ ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹೀಗಾಗಿ ₹5 ಕೋಟಿ ನೀಡಲಾಗಿದೆ ಎಂಬ ಹೊಸ ಆರೋಪದ ಬೆನ್ನಲ್ಲೇ ಕೊಹ್ಲಿ ತಂಡ ನೀಡಿರುವ ಸ್ಪಷ್ಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button