Kannada NewsKarnataka NewsLatestNationalWorld

*17 ಸಾವಿರ ಅಡಿ ಎತ್ತರದಲ್ಲಿ ಇಂಡಿಗೋ ವಿಮಾನಕ್ಕೆ ಬಡಿದ ಸಿಡಿಲು: *ಮೂತಿ ಜಖಂ*

ಪ್ರಗತಿವಾಹಿನಿ ಸುದ್ದಿ: ಪಾಟ್ನಾದಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹಾರಾಟದ ವೇಳೆ ಸಿಡಿಲು ಬಡಿದು ವಿಮಾನದ ಮುಂಭಾಗದ ರೇಡೋಮ್ ಜಖಂಗೊಂಡಿದೆ. 104 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದ ವಿಮಾನವನ್ನು ಲಕ್ನೋ ವಿಮಾನ ನಿಲ್ದಾಣದಲ್ಲಿ ನಿಗದಿತ ಸಮಯಕ್ಕಿಂತ ಎಂಟು ನಿಮಿಷ ಮುಂಚಿತವಾಗಿ ಸುರಕ್ಷಿತವಾಗಿ ಇಳಿಸಲಾಗಿದೆ.

ಸುಮಾರು 17 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ಪ್ರತಿಕೂಲ ಹವಾಮಾನವನ್ನು ಎದುರಿಸಿದೆ. ಸಿಡಿಲು ಬಡಿದ ಬಳಿಕ ಮುಂಭಾಗದಲ್ಲಿರುವ ರೇಡಾರ್ ಕವರ್‌ ಆಗಿರುವ ರೇಡೋಮ್‌ಗೆ ಹಾನಿಯಾಗಿದೆ.

ಘಟನೆಯ ಬೆನ್ನಲ್ಲೇ ವಿಮಾನವನ್ನು ಪರಿಶೀಲನೆಗಾಗಿ ಸೇವೆಯಿಂದ ಹೊರಗಿಡಲಾಗಿದೆ. ವಿಮಾನದ ತಾಂತ್ರಿಕ ಪರಿಶೀಲನೆ ಹಾಗೂ ಅಗತ್ಯ ನಿರ್ವಹಣೆ ಪೂರ್ಣಗೊಂಡ ಬಳಿಕ DGCA ಅನುಮೋದನೆ ಪಡೆದು ಮತ್ತೆ ಹಾರಾಟಕ್ಕೆ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಗೋ ವಕ್ತಾರರ ಪ್ರಕಾರ, 6E 625 ವಿಮಾನ ಲ್ಯಾಂಡಿಂಗ್‌ಗೂ ಮುನ್ನ ಆಲಿಕಲ್ಲು ಮಳೆಯಂತಹ ಪ್ರತಿಕೂಲ ಹವಾಮಾನವನ್ನು ಎದುರಿಸಿತ್ತು. ಹವಾಮಾನದ ಪರಿಣಾಮ ವಿಮಾನದ ಮುಂಭಾಗದ ರೇಡೋಮ್‌ಗೆ ಹಾನಿಯಾಗಿದ್ದರೂ, ವಿಮಾನ ಸುರಕ್ಷಿತವಾಗಿ ಲ್ಯಾಂಡ್‌ ಆಗಿದೆ.

ಎಲ್ಲ 104 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆ ಆರಂಭಿಸಿದೆ. ತಾಂತ್ರಿಕ ಪರಿಶೀಲನೆ ಮತ್ತು ನಿಯಂತ್ರಕ ಸಂಸ್ಥೆಯ ಅಗತ್ಯ ಅನುಮೋದನೆಗಳ ಬಳಿಕವಷ್ಟೇ ವಿಮಾನ ಮತ್ತೆ ಕಾರ್ಯಾಚರಣೆಗೆ ಮರಳಲಿದೆ. ಇತ್ತೀಚೆಗಷ್ಟೇ ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿದ್ದ ಮತ್ತೊಂದು ಇಂಡಿಗೋ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಹಿಂಭಾಗದ ಭಾಗ ರನ್‌ವೇಗೆ ತಾಗಿದ್ದ ಘಟನೆ ನಡೆದಿತ್ತು. ಬಳಿಕ ಆ ವಿಮಾನವನ್ನೂ ಹಾರಾಟದಿಂದ ತಡೆಹಿಡಿಯಲಾಗಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button