Kannada NewsKarnataka NewsLatestNationalPolitics

*ನಂದಿಗ್ರಾಮ, ರೇಜಿನಗರದಲ್ಲಿ ಬಿಜೆಪಿ ಭರ್ಜರಿ ಗೆಲುವು*: *ಮತದಾರರಿಗೆ ಮೋದಿ ಧನ್ಯವಾದ*

ಪ್ರಗತಿವಾಹಿನಿ ಸುದ್ದಿ: ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ನಂದಿಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹಾಸಿ ರಾಣಿ ರಥ ಅವರು ಕಾಂಗ್ರೆಸ್‌ನ ಮಿಲನ್ ಪ್ರಧಾನ್ ಅವರನ್ನು 1,22,753 ಮತಗಳ ಅಂತರದಿಂದ ಸೋಲಿಸಿದ್ದಾರೆ. ರೇಜಿನಗರದಲ್ಲೂ ಬಿಜೆಪಿ ಅಭ್ಯರ್ಥಿ ಶಂಖರವ್ ಸರ್ಕಾರ್ ಭಾರಿ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ರೇಜಿನಗರ ಕ್ಷೇತ್ರದಲ್ಲಿ ಶಂಖರವ್ ಸರ್ಕಾರ್ ಅವರು 1,29,914 ಮತಗಳನ್ನು ಪಡೆದು, ಆಮ್ ಜನತಾ ಉನ್ನಯನ್ ಪಾರ್ಟಿಯ ಗುಲಾಂ ನಬಿ ಆಜಾದ್ ಅವರನ್ನು 75,816 ಮತಗಳ ಅಂತರದಿಂದ ಸೋಲಿಸಿದ್ದಾರೆ. ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ರಾಜಕೀಯವಾಗಿ ಗಮನ ಸೆಳೆದಿದೆ.

ಅಸ್ಸಾಂನ ನಗಾಂವ್ ಲೋಕಸಭಾ ಉಪಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ದೇವಾಶಿಶ್ ಶರ್ಮಾ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶಗಳ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಉತ್ತಮ ಆಡಳಿತದ ಮೇಲೆ ಜನರು ವಿಶ್ವಾಸವಿಟ್ಟಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ವಿಜೇತ ಬಿಜೆಪಿ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮೋದಿ, ಪಕ್ಷದ ಕಾರ್ಯಕರ್ತರ ಶ್ರಮವನ್ನೂ ಶ್ಲಾಘಿಸಿದ್ದಾರೆ. ಪುದುಚೇರಿಯ ತಟ್ಟಂಚಾವಡಿ ಕ್ಷೇತ್ರದಲ್ಲಿ ಗೆದ್ದ ಎನ್‌ಡಿಎ ಮಿತ್ರಪಕ್ಷ ಎಐಎನ್‌ಆರ್‌ಸಿಗೂ ಅಭಿನಂದನೆ ತಿಳಿಸಿದ್ದಾರೆ. ಜನರ ಕಲ್ಯಾಣ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಕೆಲಸ ಮಾಡಲು ಈ ಜನಾದೇಶ ಮತ್ತಷ್ಟು ಬಲ ನೀಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಂದಿಗ್ರಾಮ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಂಡು ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಅನಿವಾರ್ಯವಾಗಿತ್ತು. ಸುವೇಂದು ಅಧಿಕಾರಿ ಅವರ ಮಾಜಿ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿ ಹಾಸಿ ರಾಣಿ ರಥ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಚಂದ್ರನಾಥ್ ರಥ್ ಅವರು ಮೇ 6ರಂದು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು. ರೇಜಿನಗರ ಕ್ಷೇತ್ರದಲ್ಲಿ ಆಮ್ ಜನತಾ ಉನ್ನಯನ್ ಪಾರ್ಟಿ ಮುಖ್ಯಸ್ಥ ಹುಮಾಯೂನ್ ಕಬೀರ್ ಅವರು ನೌದಾ ಕ್ಷೇತ್ರವನ್ನು ಉಳಿಸಿಕೊಂಡು ರೇಜಿನಗರಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿತ್ತು. ಈ ಎರಡು ಕ್ಷೇತ್ರಗಳ ಫಲಿತಾಂಶ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button