Belagavi NewsBelgaum NewsCrimeKannada NewsKarnataka NewsLatestNationalPolitics

*6 ಮನೆಗಳಲ್ಲಿ ಕಳ್ಳತನ ಕೇಸ್ ಭೇದಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಗ್ರಾಮೀಣ ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ ಬರೋಬ್ಬರಿ ₹26.53 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ಟೋಬರ್ 2ರಂದು ಸ್ವಾಮಿ ವಿವೇಕಾನಂದ ನಗರ, ಹುಂಚ್ಯಾನಟ್ಟಿ ನಿವಾಸಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಅವರು ತಮ್ಮ ಮನೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಅಪರಾಧ ಸಂಖ್ಯೆ 218/2026ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೋಹನ ರೂಪೇಶ ಪಾಟೀಲ (30) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪೀರನವಾಡಿ, ಹುಂಚ್ಯಾನಟ್ಟಿ ಹಾಗೂ ಮಚ್ಚೆ ಗ್ರಾಮಗಳಲ್ಲಿ ಹಗಲು ವೇಳೆಯಲ್ಲಿ ಸ್ಕೂಟಿಯಲ್ಲಿ ಸಂಚರಿಸಿ ಒಟ್ಟು 6 ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಿಂದ ₹23,88,400 ಮೌಲ್ಯದ 161 ಗ್ರಾಂ ಚಿನ್ನಾಭರಣ, ₹2,30,000 ಮೌಲ್ಯದ 1 ಕೆ.ಜಿ. ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ ₹35 ಸಾವಿರ ಮೌಲ್ಯದ ಸ್ಕೂಟಿ (KA-22/EU-2160) ಹಾಗೂ ಕಬ್ಬಿಣದ ಉಳಿ, ಕಟರ್, ಸ್ಕ್ರೂಡ್ರೈವರ್, ಪಾನಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ಒಟ್ಟು ₹26,53,400 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಪ್ರಕರಣ ಭೇದಿಸುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪಿಐ ನಾಗನಗೌಡ ಕಟ್ಟಿಮನಿಗೌಡ್ರ, ಪಿಎಸ್‌ಐಗಳಾದ ಸಂತೋಷ ದಳವಾಯಿ, ಲಕ್ಷ್ಮಪ್ಪ ಜೋಡಟ್ಟಿ, ವೈ.ಡಿ. ಸರನಾಯ್ಕ ಹಾಗೂ ಸಿಬ್ಬಂದಿ ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ, ಮಾರುತಿ ಕೋಟಬಾಗಿ, ಬಾಳೇಶ ಪಡನಾಡ, ಆನಂದ ಕೋಟಗಿ, ಶಿವಾನಂದ ವರ್ಚಗಲ್ಲ, ತಾಂತ್ರಿಕ ವಿಭಾಗದ ರಮೇಶ ಅಕ್ಕಿ, ಮಹಾದೇವ ಕಾಶಿದ ಹಾಗೂ ದೀಪಕ ದೊಡ್ಡಗೋಣಿ ಶ್ರಮಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button