Kannada NewsLatestNational

*75 ರೈಲುಗಳು ಬಂದ್, ಇಂಟರ್ ನೆಟ್ ಸಂಪೂರ್ಣ ಸ್ಥಗಿತ*: *ರಾಷ್ಟ್ರ ರಾಜಧಾನಿಯಲ್ಲಿ BNSS ಸೆಕ್ಷನ್ 163 ಜಾರಿ*

ಪ್ರಗತಿವಾಹಿನಿ ಸುದ್ದಿ: ಎಸ್ಐಆರ್ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಂದು ಪ್ರತಿಭಟನೆಗೆ ಕರೆ ನೀಡಿದ್ದು, ವಿಪಕ್ಷಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

ಸಿಜೆಪಿ ಪ್ರತಿಭಟನೆಗೆ ಪೊಲೀಸರು ಅನುಮತಿ ನೀಡಿಲ್ಲ. ಆದಾಗ್ಯೂ ಸಿಜೆಪಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಸಿಜೆಪಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿಭಟನೆಯ ಪರಿಣಾಮವಾಗಿ ಮೆಟ್ರೋ ಸಂಚಾರ, ರೈಲು ಸೇವೆ, ಇಂಟರ್ನೆಟ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.

ದೆಹಲಿ ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಬಂದ್ ಮಾಡುವುದಾಗಿ ಘೋಷಿಸಲಾಗಿದೆ. ಯೆಲ್ಲೋ, ರೆಡ್, ಬ್ಲೂ, ಪಿಂಕ್, ವೈಲೆಟ್ ಮತ್ತು ಮೆಜೆಂಟಾ ಮಾರ್ಗಗಳ ನಿಲ್ದಾಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏರ್‌ಪೋರ್ಟ್ ಮಾರ್ಗದ ಶಿವಾಜಿ ಸ್ಟೇಡಿಯಂ ನಿಲ್ದಾಣವನ್ನೂ ಮುಚ್ಚಲಾಗಿದೆ. ರೈಲ್ವೆ ಇಲಾಖೆಯು 75 ರೈಲುಗಳನ್ನು ರದ್ದುಗೊಳಿಸಿದ್ದು, ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಮಧ್ಯ ದೆಹಲಿಯಲ್ಲಿ BNSS ಸೆಕ್ಷನ್ 163 ಜಾರಿಗೊಳಿಸಲಾಗಿದೆ.

ದೆಹಲಿಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಅಕ್ಟೋಬರ್ 8ರಿಂದ 12ರವರೆಗೆ ಸುಮಾರು 23 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ನಿರೀಕ್ಷೆಯಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲು ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ ಜಿಲ್ಲೆಯನ್ನು 20 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಬಹುಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸಿಸಿಟಿವಿ ಮತ್ತು ಮುಖ ಗುರುತಿಸುವ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳ ಮೂಲಕ ಜನರ ಸಂಚಾರದ ಮೇಲೆ ನಿಗಾ ಇರಿಸಲಾಗುತ್ತದೆ.

ದೆಹಲಿ-ನೋಯ್ಡಾ ಗಡಿಭಾಗದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಚಿಲ್ಲಾ ಗಡಿಯಲ್ಲಿ ದೆಹಲಿ ಮತ್ತು ನೋಯ್ಡಾ ಪೊಲೀಸರ ಜೊತೆಗೆ ಗಡಿ ಭದ್ರತಾ ಪಡೆ (BSF) ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ರೈಲು ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇಂದು ಮುಮ್ಜಾನೆ 4ರಿಂದ ಮಧ್ಯಾಹ್ನ 2ರವರೆಗೆ ಹೊಸ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ 10 ಗಂಟೆಗಳ ಕಾಲ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button