Belagavi NewsBelgaum NewsCrimeKannada NewsKarnataka NewsNational

*ಶಿವಂ ಸ್ಕ್ಯಾಮ್ ತನಿಖೆ ಚುರುಕು: ಆರು ಮಂದಿ ವಿರುದ್ಧ ಇಡಿ ಚಾರ್ಜ್‌ಶೀಟ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ‘ಶಿವಂ ಸ್ಕ್ಯಾಮ್’ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) ಮತ್ತಷ್ಟು ಚುರುಕುಗೊಳಿಸಿದೆ. 

ಪ್ರಕರಣದ ಪ್ರಮುಖ ಆರೋಪಿ ಹಾಗೂ ಕಿಂಗ್‌ಪಿನ್ ಎನ್ನಲಾಗಿರುವ ಶಿವಾನಂದ ಸಿದ್ದಪ್ಪ ನೀಲಣ್ಣವರ್ ಸೇರಿದಂತೆ ಒಟ್ಟು ಆರು ಮಂದಿ ವಿರುದ್ಧ ಇಡಿ ಮಂಗಳೂರು ಶಾಖೆ ವಿಶೇಷ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.

ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸಿ, ಬರೋಬ್ಬರಿ ₹2,459 ಕೋಟಿಗೂ ಅಧಿಕ ಮೊತ್ತ ವಂಚಿಸಲಾಗಿದೆ ಎಂಬ ಆರೋಪ ಪ್ರಕರಣದಲ್ಲಿದೆ. ಇದೀಗ ಈ ಹಣವನ್ನು ಆರೋಪಿಗಳು ಹೇಗೆ ಬಳಸಿಕೊಂಡಿದ್ದರು ಎಂಬ ಅಂಶಗಳು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ತನಿಖೆಯ ಪ್ರಕಾರ, ವಂಚನೆಯಿಂದ ಸಂಗ್ರಹಿಸಿದ್ದ ಹಣದ ಒಂದು ಭಾಗವನ್ನು ಷೇರು ಮಾರುಕಟ್ಟೆಯ ವಿವಿಧ ವಹಿವಾಟುಗಳಲ್ಲಿ ಹೂಡಿಕೆ ಮಾಡಲಾಗಿದೆ. ಅಲ್ಲದೆ, ಹಲವು ಸಹಕಾರ ಸಂಘಗಳಲ್ಲಿ ಎಫ್‌ಡಿ ರೂಪದಲ್ಲಿ ಹಣ ಇರಿಸಿರುವುದು ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವುದಾಗಿ ಇಡಿ ದೂರಿನಲ್ಲಿ ಉಲ್ಲೇಖಿಸಿದೆ.

ಇಷ್ಟೇ ಅಲ್ಲದೆ, ಆರೋಪಿಗಳು ತಮ್ಮ ಕುಟುಂಬ ಸದಸ್ಯರ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ವರ್ಗಾವಣೆ ಮಾಡಿದ್ದು, ಅಕ್ರಮ ಹಣವನ್ನು ಬೇರೆಡೆಗೆ ಸಾಗಿಸುವ ಮೂಲಕ ಮನಿ ಲಾಂಡರಿಂಗ್ ನಡೆಸಿರುವ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಅಂಶವೂ ತನಿಖೆಯಿಂದ ಬಹಿರಂಗವಾಗಿದೆ. ಸಾರ್ವಜನಿಕರಿಂದ ವಂಚಿಸಿ ಸಂಗ್ರಹಿಸಿದ್ದ ಹಣದ ಒಂದು ಭಾಗವನ್ನು ‘ಚಾಂಪಿಯನ್’ ಹೆಸರಿನ ಕನ್ನಡ ಚಲನಚಿತ್ರ ನಿರ್ಮಾಣಕ್ಕೂ ಬಳಸಲಾಗಿದೆ ಎಂದು ಇಡಿ ತನ್ನ ಪ್ರಾಸಿಕ್ಯೂಷನ್ ದೂರಿನಲ್ಲಿ ಉಲ್ಲೇಖಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆಸ್ತಿ ಹಾಗೂ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ನಡೆಸಿರುವ ಇಡಿ, ಹಗರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆಸ್ತಿಗಳ ಜಪ್ತಿ ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ನಡೆಯುವ ಸಾಧ್ಯತೆ ಇದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button