Belagavi NewsBelgaum NewsKannada NewsKarnataka NewsPolitics

*ಕಬ್ಬು ಬೆಳೆಗಾರರ ಹೋರಾಟಕ್ಕೆ ಸಾಥ್*: *34 ರೈತರಿಗೆ ಶಾಸಕ ಎಂ.ಆರ್. ಪಾಟೀಲ್‌ನಿಂದ ವಿಮಾನ ಟಿಕೆಟ್!*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಕ್ಟೋಬರ್ 12ರಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ 34 ರೈತರಿಗೆ ಕುಂದಗೋಳ ಶಾಸಕ ಎಂ.ಆರ್. ಪಾಟೀಲ್ ತಮ್ಮ ಸ್ವಂತ ಹಣದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿಸಿದ್ದಾರೆ.

ದೆಹಲಿಗೆ ತೆರಳಲು ಆರ್ಥಿಕ ಸಮಸ್ಯೆ ಎದುರಾಗಬಹುದು ಎಂದು ರೈತರು ತಿಳಿಸಿದ ಹಿನ್ನೆಲೆಯಲ್ಲಿ, ಸಭೆಯಲ್ಲಿ ಭಾಗವಹಿಸಲು ಮುಂದೆ ಬರುವ ರೈತರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಶಾಸಕ ಎಂ.ಆರ್. ಪಾಟೀಲ್ ಭರವಸೆ ನೀಡಿದ್ದರು. ಅದರಂತೆ, ಇದೀಗ 34 ರೈತರಿಗೆ ಟಿಕೆಟ್ ಕಾಯ್ದಿರಿಸಲಾಗಿದ್ದು, ಅಕ್ಟೋಬರ್ 12ರಂದು ಬೆಳಿಗ್ಗೆ 9 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣದಿಂದ ರೈತರು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಪ್ರಯತ್ನದಿಂದ ದೆಹಲಿಯಲ್ಲಿ ಈ ಸಭೆ ಆಯೋಜಿಸಲಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯದ ಸಚಿವರಾದ ಲಕ್ಷ್ಮಣ ಸವದಿ ಮತ್ತು ಸಕ್ಕರೆ ಸಚಿವರೂ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಅಕ್ಟೋಬರ್ 12ರಂದು ಮಧ್ಯಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದ್ದು, ಕಬ್ಬು ಬೆಳೆಗಾರರ ಪ್ರಮುಖ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ. ಸಭೆಯಲ್ಲಿ ಯಾವ ಬೇಡಿಕೆಗಳಿಗೆ ಸ್ಪಂದನೆ ಸಿಗಲಿದೆ ಎಂಬುದರ ಬಗ್ಗೆ ರೈತರು ಎದುರು ನೋಡುತ್ತಿದ್ದಾರೆ.

ರೈತರ ಪ್ರಮುಖ ಬೇಡಿಕೆಗಳೇನು?

ಕಬ್ಬು ಬೆಳೆಗಾರರು ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಪ್ರತಿ ಕೆ.ಜಿಗೆ ₹31ರಿಂದ ₹60ಕ್ಕೆ ಹೆಚ್ಚಿಸಬೇಕು. ಕಬ್ಬಿನ ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಟನ್‌ಗೆ ₹5,500ಕ್ಕೆ ನಿಗದಿಪಡಿಸಬೇಕು.ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್‌ ಖರೀದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು.

ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ತಿಂಗಳು ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರು ಬೃಹತ್ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ಕೈಬಿಡಲು ನಡೆದಿತ್ತು ಸಂಧಾನ

ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಶಾಸಕ ಎಂ.ಆರ್. ಪಾಟೀಲ್ ಮತ್ತು ಶಾಸಕ ಮಹೇಶ್ ಟೆಂಗಿನಕಾಯಿ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿ ದೆಹಲಿಯಲ್ಲಿ ಸಭೆ ಆಯೋಜಿಸುವುದಾಗಿ ಹಾಗೂ ರೈತರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದರು.

ಈ ಭರವಸೆಯ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಹಿಂಪಡೆದಿದ್ದರು. ಇದೀಗ ದೆಹಲಿಯಲ್ಲಿ ನಡೆಯಲಿರುವ ಸಭೆಯತ್ತ ರಾಜ್ಯ ಮಾತ್ರವಲ್ಲದೆ ದೇಶದ ಕಬ್ಬು ಬೆಳೆಗಾರರ ಗಮನವೂ ನೆಟ್ಟಿದೆ.ರೈತರ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ? ಕಬ್ಬಿನ ಬೆಲೆ ನಿಗದಿ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆಯೇ? ಎಂಬುದು ಸಭೆಯ ಬಳಿಕ ಸ್ಪಷ್ಟವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button