Kannada NewsTravelWorld

*ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ*: *ಭಾರತೀಯ ಮೂಲದ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಹೈದರಾಬಾದ್‌ನ ಮೆಹದಿಪಟ್ನಂ ನಿವಾಸಿ ಮೊಹಮ್ಮದ್ ಯೂಸುಫ್ ಅಲಿ  ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಅವರ ಇಬ್ಬರು ಪುತ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಪುತ್ರನಿಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು, ಮತ್ತೋರ್ವ ಪುತ್ರನ ಕಾಲಿನ ಮೂರು ಬೆರಳುಗಳು ಕತ್ತರಿಸಿವೆ. ಯೂಸುಫ್ ಅವರ ಪತ್ನಿ ಹಾಗೂ ಪುತ್ರಿ ಸುರಕ್ಷಿತವಾಗಿದ್ದಾರೆ. ಜೊತೆಯಲ್ಲಿದ್ದ ಚಿಕ್ಕಮ್ಮನ ತಲೆಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಯೂಸುಫ್ ಅಲಿ ಮೃತಪಟ್ಟಿದ್ದು, ಅವರ ಇಬ್ಬರು ಪುತ್ರರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ರಿಯಾದ್‌ನಲ್ಲಿರುವ ಯೂಸುಫ್ ಅವರ ಸಂಬಂಧಿಕರು ಹಾಗೂ ಭಾರತೀಯ ರಾಯಭಾರ ಕಚೇರಿಯ ಡೆಪ್ಯುಟಿ ಚೀಫ್ ಆಫ್ ಮಿಷನ್ ಅವರೊಂದಿಗೆ ಮಾತನಾಡಿರುವುದಾಗಿ ಓವೈಸಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಅಗತ್ಯ ನೆರವು ಒದಗಿಸುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಮಾಡಿದ್ದಾರೆ.

ಭಾರತೀಯ ರಾಯಭಾರ ಕಚೇರಿಯ ಮಾಹಿತಿ ಪ್ರಕಾರ, ಗಾಯಗೊಂಡಿರುವ ಮೂವರು ಭಾರತೀಯರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತಿಬ್ಬರು ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರಿಯಾದ್ ವಿಮಾನ ನಿಲ್ದಾಣದ ಮೇಲೆ ಸತತ ಎರಡು ದಿನಗಳಲ್ಲಿ ಎರಡು ಕ್ಷಿಪಣಿ ದಾಳಿಗಳು ನಡೆದಿವೆ. 

ಮೊದಲ ದಾಳಿಯಲ್ಲಿ ಯೂಸುಫ್ ಅಲಿ ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳಿದ್ದಾರೆ. ಮತ್ತೊಂದು ದಾಳಿಯಲ್ಲಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಎರಡೂ ದಾಳಿಗಳ ಹೊಣೆಯನ್ನು ಹೌತಿ ಬಂಡುಕೋರರು ಹೊತ್ತುಕೊಂಡಿದ್ದಾರೆ. ಯೆಮೆನ್ ಅಂತರ್ಯುದ್ಧದಲ್ಲಿ ಸೌದಿ ಅರೇಬಿಯಾ ಸರ್ಕಾರಿ ಪಡೆಗಳಿಗೆ ಬೆಂಬಲ ನೀಡುತ್ತಿರುವುದಕ್ಕೆ ಹಾಗೂ ಸನಾದಲ್ಲಿನ ವಿಮಾನ ನಿಲ್ದಾಣದ ಮೇಲಿನ ವೈಮಾನಿಕ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ.

ಇದರ ಬೆನ್ನಲ್ಲೇ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಹಾಗೂ ವಾಯುಪ್ರದೇಶ ಬಳಸದಂತೆ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಹೌತಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button