
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಸರ್ಕಾರಿ, ಅನುದಾನಿತ ಪದವಿ ಕಾಲೇಜುಗಳು ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಪದವಿ ವಿದ್ಯಾರ್ಥಿಗಳಿಗೂ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಬಯೋಮೆಟ್ರಿಕ್ ಹಾಜರಾತಿಯನ್ನು ಪರೀಕ್ಷಾ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಪ್ರಸ್ತಾವನೆಯನ್ನು ಕೂಡ ಸಿದ್ಧಪಡಿಸಲಾಗಿದೆ.
ವಿದ್ಯಾರ್ಥಿಗಳು ಕನಿಷ್ಠ ಶೇಕಡ 75ರಷ್ಟು ಹಾಜರಾತಿ ಹೊಂದಿಲ್ಲದಿದ್ದರೆ ಪರೀಕ್ಷೆಯ ಪ್ರವೇಶ ಪತ್ರ ಸೃಜನೆಯಾಗದಂತೆ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಯ ಹಾಜರಾತಿ ದಾಖಲಿಸಲು ಈಗಾಗಲೇ ಬಯೋಮೆಟ್ರಿಕ್ ತಂತ್ರಜ್ಞಾನ ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೂ ಬಯೋಮೆಟ್ರಿಕ್ ಹಾಜರಾತಿ ಪರಿಚಯಿಸಿದಲ್ಲಿ ತರಗತಿಗಳಿಗೆ ಗೈರುಹಾಜರಾಗುವ ಪ್ರಮಾಣ ಕಡಿಮೆಯಾಗಲಿದೆ ಎನ್ನುವ ಬಗ್ಗೆ ಉನ್ನತ ಶಿಕ್ಷಣ ಪರಿಷತ್ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
2026- 27ನೇ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದೊಳಗೆ ಅಗತ್ಯ ಸಿದ್ಧತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ವಿದ್ಯಾರ್ಥಿಗಳಿಗೂ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಬಯೋಮೆಟ್ರಿಕ್ ಹೇಗೆ ಕಾರ್ಯನಿರ್ವಹಿಸಲಿದೆ?
ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವುದು ಈ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಕಾಲೇಜಿಗೆ ಬಂದಾಗ ಅಥವಾ ತರಗತಿಗೆ ಹಾಜರಾದಾಗ ಬಯೋಮೆಟ್ರಿಕ್ ಸಾಧನದ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ರೂಪಿಸುವ ಪ್ರಸ್ತಾವನೆ ಇದೆ.
ಬಯೋಮೆಟ್ರಿಕ್ ಹಾಜರಾತಿಯ ಮಾಹಿತಿಯನ್ನು ಪರೀಕ್ಷಾ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಂಯೋಜಿಸಿದರೆ, ವಿದ್ಯಾರ್ಥಿಯ ಹಾಜರಾತಿ ಪ್ರಮಾಣವನ್ನು ಸ್ವಯಂಚಾಲಿತವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರಿಂದ ಹಾಜರಾತಿ ದಾಖಲೆಯಲ್ಲಿ ಆಗಬಹುದಾದ ತಪ್ಪುಗಳು ಮತ್ತು ದುರುಪಯೋಗವನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆಯಿದೆ.
ಪ್ರಸ್ತಾವಿತ ವ್ಯವಸ್ಥೆಯ ಪ್ರಕಾರ, ವಿದ್ಯಾರ್ಥಿಗಳು ಕನಿಷ್ಠ ಶೇ. 75ರಷ್ಟು ಹಾಜರಾತಿ ಹೊಂದಿರಬೇಕು. ನಿಗದಿತ ಹಾಜರಾತಿ ಇಲ್ಲದಿದ್ದರೆ ಪರೀಕ್ಷೆಯ ಪ್ರವೇಶ ಪತ್ರ (ಹಾಲ್‌ಟಿಕೆಟ್) ಸೃಜನೆಯಾಗದಂತೆ ತಂತ್ರಾಂಶ ರೂಪಿಸುವ ಚಿಂತನೆ ನಡೆದಿದೆ.
ವಿದ್ಯಾರ್ಥಿಗಳ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲು ಅಗತ್ಯ ತಾಂತ್ರಿಕ ಸಿದ್ಧತೆ, ಸಾಧನಗಳ ಅಳವಡಿಕೆ ಮತ್ತು ಟೆಂಡರ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಪ್ರಸ್ತಾವನೆ ಇದೆ. ನಂತರ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಪದವಿ ಕಾಲೇಜುಗಳು ಹಾಗೂ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೆ ತರುವ ಉದ್ದೇಶವಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




