CrimeKannada NewsKarnataka NewsLatest

*ಗಣೇಶೋತ್ಸವಕ್ಕೆ ಹೋಗುತ್ತೇನೆಂದು ಮನೆಯಿಂದ ಹೊರಟ ವಿದ್ಯಾರ್ಥಿ ಕೆರೆಯಲ್ಲಿ ಮುಳುಗಿ ಸಾವು*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಕಾಲೇಜಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿರುವುದಾಗಿ ಹೇಳಿ ಹೊರಟಿದ್ದ 20 ವರ್ಷದ ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.

ಮೃತ ವಿದ್ಯಾರ್ಥಿಯನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ನಿವಾಸಿಗಳಾದ ವಿಶ್ವನಾಥ್ ಮತ್ತು ಭವ್ಯ ದಂಪತಿಯ ಪುತ್ರ ಹರ್ಷ (20) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟ ಕೆರೆಯಲ್ಲಿ ವಿದ್ಯಾರ್ಥಿ ಮುಳುಗಿ ಮೃತಪಟ್ಟಿದ್ದಾನೆ. ಸೋಮವಾರ ಮನೆಯಲ್ಲಿ ದೇವರ ಪೂಜೆ ಮುಗಿಸಿದ ಹರ್ಷ, ಕಾಲೇಜಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದನು.

ಆದರೆ ಕಾಲೇಜಿಗೆ ತೆರಳುವ ಬದಲು ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ಹೋಗಿದ್ದಾನೆ. ಈ ವೇಳೆ ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದಾನೆ. ಈಜು ಸರಿಯಾಗಿ ಬಾರದ ಕಾರಣ ಆಳವಾದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸೋಲದೇವನಹಳ್ಳಿ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದರು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೆರವಿನಿಂದ ಕೆರೆಯಲ್ಲಿ ಹುಡುಕಾಟ ನಡೆಸಿ ಹರ್ಷನ ಮೃತದೇಹವನ್ನು ಹೊರತೆಗೆಯಲಾಯಿತು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕೈಯಾರೆ ಬೆಳೆಸಿದ ಮಗನನ್ನು ಕಳೆದುಕೊಂಡ ಪೋಷಕರ ದುಃಖ ಹೇಳತೀರದಾಗಿದೆ. ಗಣೇಶೋತ್ಸವದ ಸಂಭ್ರಮದ ನಡುವೆಯೇ ಸಂಭವಿಸಿದ ಈ ದುರಂತ ಸ್ಥಳೀಯರಲ್ಲಿ ಕೂಡ ದುಃಖ ಮೂಡಿಸಿದೆ. ಕೆರೆಗಳಲ್ಲಿ ಈಜಲು ಇಳಿಯುವಾಗ ಎಚ್ಚರಿಕೆ ವಹಿಸುವುದು ಹಾಗೂ ಈಜು ಬಾರದವರು ಆಳವಾದ ನೀರಿಗೆ ಇಳಿಯದಿರುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button