*ಬ್ರೇಕಿಂಗ್ ಬ್ಯಾಡ್ ಖ್ಯಾತಿಯ ನಟ ಆರ್‌ಜೆ ಮಿಟ್ಟೆ ನಿಧನ*: *34ನೇ ವಯಸ್ಸಿಗೆ ಬದುಕಿನ ಪಯಣ ಅಂತ್ಯ!*

ಪ್ರಗತಿವಾಹಿನಿ ಸುದ್ದಿ: ಜನಪ್ರಿಯ ಅಮೆರಿಕನ್ ಟಿವಿ ಸರಣಿ ‘ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದ ನಟ ಆರ್‌ಜೆ ಮಿಟ್ಟೆ (RJ Mitte) ತಮ್ಮ 34ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ಕೊನೆಯುಸಿರೆಳೆದಿದ್ದು, ಅವರ ಪ್ರತಿನಿಧಿ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಸಾವಿಗೆ ನಿಖರ ಕಾರಣವನ್ನು ತಕ್ಷಣಕ್ಕೆ ಬಹಿರಂಗಪಡಿಸಲಾಗಿಲ್ಲ. ನಟನ ಅಗಲಿಕೆಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆರ್‌ಜೆ ಮಿಟ್ಟೆ ಅವರ ಪ್ರತಿನಿಧಿ ಸೀನ್ ರೀಲಿ, ನಟನ ನಿಧನದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅಭಿನಯದ ಜೊತೆಗೆ ಸಮಾಜಸೇವೆ ಮತ್ತು ಅಂಗವಿಕಲರ ಹಕ್ಕುಗಳ ಪರವಾಗಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ಮಿಟ್ಟೆ ಸಕ್ರಿಯರಾಗಿದ್ದರು. ತಮ್ಮ ವೈಯಕ್ತಿಕ ಅನುಭವಗಳನ್ನು ಬಳಸಿಕೊಂಡು ಅಂಗವಿಕಲರ ಪ್ರಾತಿನಿಧ್ಯ ಹಾಗೂ ಸಮಾನ ಅವಕಾಶಗಳ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ಅವರು ಶ್ರಮಿಸಿದ್ದರು.
ಮಿಟ್ಟೆ ಅವರಿಗೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದು 2008ರಿಂದ 2013ರವರೆಗೆ ಪ್ರಸಾರವಾದ ‘ಬ್ರೇಕಿಂಗ್ ಬ್ಯಾಡ್’ ಸರಣಿ. ಇದರಲ್ಲಿ ಬ್ರಯಾನ್ ಕ್ರಾನ್ಸ್ಟನ್ ಮತ್ತು ಆರನ್ ಪಾಲ್ ಅವರಂತಹ ಪ್ರತಿಭಾವಂತ ಕಲಾವಿದರೊಂದಿಗೆ ಅಭಿನಯಿಸಿದ್ದರು. ಸರಣಿಯಲ್ಲಿ ವಾಲ್ಟರ್ ವೈಟ್‌ನ ಮಗನ ಪಾತ್ರ ನಿರ್ವಹಿಸಿದ್ದ ಅವರು, ತಮ್ಮ ಸಹಜ ಅಭಿನಯ ಮತ್ತು ಭಾವನಾತ್ಮಕ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.
ರಸಾಯನಶಾಸ್ತ್ರದ ಶಿಕ್ಷಕನಾಗಿದ್ದ ವಾಲ್ಟರ್ ವೈಟ್ ಕ್ಯಾನ್ಸರ್ ಪತ್ತೆಯಾದ ಬಳಿಕ ಕುಟುಂಬದ ಭವಿಷ್ಯಕ್ಕಾಗಿ ಅಪರಾಧ ಜಗತ್ತಿನತ್ತ ಹೆಜ್ಜೆ ಹಾಕುವ ಕಥೆಯನ್ನು ಈ ಸರಣಿ ಒಳಗೊಂಡಿದೆ. ಕಥೆಯಲ್ಲಿ ತಂದೆಯ ಬದಲಾದ ವರ್ತನೆ ಮತ್ತು ಕುಟುಂಬದಲ್ಲಿನ ಸಂಘರ್ಷಗಳನ್ನು ಎದುರಿಸುವ ವಾಲ್ಟರ್ ವೈಟ್ ಜೂನಿಯರ್ ಪಾತ್ರವನ್ನು ಮಿಟ್ಟೆ ಪರಿಣಾಮಕಾರಿಯಾಗಿ ನಿರ್ವಹಿಸಿದ್ದರು. ಈ ಪಾತ್ರದ ಮೂಲಕ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು.
ಆರ್‌ಜೆ ಮಿಟ್ಟೆ ಅವರು ಸೆರೆಬ್ರಲ್ ಪಾಲ್ಸಿ ಎಂಬ ನರಮಂಡಲಕ್ಕೆ ಸಂಬಂಧಿಸಿದ ಸ್ಥಿತಿಯೊಂದಿಗೆ ಬದುಕುತ್ತಿದ್ದರು. ತಮ್ಮ ಜೀವನದ ಅನುಭವಗಳನ್ನು ಅಭಿನಯದಲ್ಲಿ ಬಳಸಿಕೊಳ್ಳುವ ಮೂಲಕ ಅಂಗವಿಕಲರ ಬದುಕು ಮತ್ತು ಸಾಮರ್ಥ್ಯಗಳ ಕುರಿತು ಜಾಗೃತಿ ಮೂಡಿಸಿದರು. ‘ಬ್ರೇಕಿಂಗ್ ಬ್ಯಾಡ್’ ತಂಡದ ಸದಸ್ಯರಾಗಿ 2014ರಲ್ಲಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿಯನ್ನೂ ಪಡೆದಿದ್ದರು.
ನಟನೆಯ ಹೊರತಾಗಿಯೂ ಮಿಟ್ಟೆ ಸಮಾಜಸೇವೆಯಲ್ಲಿ ಸಕ್ರಿಯರಾಗಿದ್ದರು. ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಮತ್ತು ಶ್ರೈನರ್ಸ್ ಚಿಲ್ಡ್ರನ್ಸ್ ಸಂಸ್ಥೆಗಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು. ಅಂಗವಿಕಲರ ಹಕ್ಕುಗಳು, ಸಮಾನ ಅವಕಾಶಗಳು ಹಾಗೂ ಸಮಾಜದಲ್ಲಿ ಅವರ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು.
ಇದಲ್ಲದೆ, ಸಮಾಜಸೇವೆ ಮತ್ತು ಸಮುದಾಯದ ಅಭಿವೃದ್ಧಿ ಕಾರ್ಯಗಳನ್ನು ಬೆಂಬಲಿಸಲು ‘ದಿ ಮಿಟ್ಟೆ ಫೌಂಡೇಶನ್’ ಮೂಲಕವೂ ಅವರು ಸೇವೆ ಸಲ್ಲಿಸಿದ್ದರು. ಅಂಗವಿಕಲರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ದೂರ ಮಾಡಿ, ಅವರಿಗೂ ಸಮಾನ ಅವಕಾಶಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅಭಿನಯ ಮತ್ತು ಸಮಾಜಸೇವೆಯ ಮೂಲಕ ಗುರುತಿಸಿಕೊಂಡಿದ್ದ ಆರ್‌ಜೆ ಮಿಟ್ಟೆ ಅವರ ಅಕಾಲಿಕ ನಿಧನ ಅಭಿಮಾನಿಗಳಲ್ಲಿ ದುಃಖ ಮೂಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



