*ರೈತರ ಪ್ರತಿಭಟನೆಯ ಬಿಸಿ: ಬಿಎಡ್ ಪರೀಕ್ಷೆ ಮುಂದೂಡಿದ ಆರ್ಸಿಯು!*

ಪ್ರಗತಿವಾಹಿನಿ ಸುದ್ದಿ: ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆಯ ಪರಿಣಾಮವಾಗಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು (ಆರ್ಸಿಯು) ಇಂದು ನಿಗದಿಪಡಿಸಿದ್ದ ಬಿಎಡ್ ಪರೀಕ್ಷೆಗಳನ್ನು ಮುಂದೂಡಿ ಆದೇಶ ಹೊರಡಿಸಿದೆ.
ಇಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ನಡೆಯಬೇಕಿದ್ದ ಬಿಎಡ್ ಕೋರ್ಸ್ನ ಶೈಕ್ಷಣಿಕ ನಿರ್ವಹಣೆ ಮತ್ತು ಸಂಘಟನೆ ವಿಷಯದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರೊ. ಡಿ.ಎಂ. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಪರೀಕ್ಷೆಗಳನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತು ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.
ನಾಳೆ ನಡೆಯಬೇಕಿರುವ ಪರೀಕ್ಷೆಗಳ ಬಗ್ಗೆ ಇಂದು ಸಂಜೆ ಅಧಿಕೃತ ನಿರ್ಧಾರ ಪ್ರಕಟವಾಗುವ ನಿರೀಕ್ಷೆಯಿದೆ. ಸದ್ಯಕ್ಕೆ ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮಾತ್ರ ಮುಂದೂಡಲಾಗಿದ್ದು, ಮುಂದಿನ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಪ್ರಕಟಣೆಯನ್ನು ಗಮನಿಸುವಂತೆ ಸೂಚಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


