Film & EntertainmentKannada NewsKarnataka NewsLatest

*ಸುದೀಪ್‌ಗೆ ಅಗೌರವ ತೋರಿಲ್ಲ, ಹೋರಾಟಕ್ಕೆ ಬನ್ನಿ ಎಂದಿದ್ದೇನೆ*: ಉಗ್ರಪ್ಪ ಸ್ಪಷ್ಟನೆ!

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗದಲ್ಲಿ ನಡೆದ ರಾಜವೀರ ಮದಕರಿ ನಾಯಕ ಜಯಂತೋತ್ಸವದ ವೇಳೆ ನಟ ಕಿಚ್ಚ ಸುದೀಪ್ ಕುರಿತು ತಾವು ಆಡಿದ ಮಾತುಗಳು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಅವರಿಗೆ ಯಾವುದೇ ಅಗೌರವ ತೋರಿಲ್ಲ. ಸಮಾಜದ ಹಕ್ಕುಗಳಿಗಾಗಿ ನಡೆಯುವ ಹೋರಾಟಕ್ಕೆ ಬನ್ನಿ ಎಂದಿದ್ದೇನೆ ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಮುಖಂಡ ರಾಜುಗೌಡ ತಮ್ಮ ಹೇಳಿಕೆಯನ್ನು ಟೀಕಿಸಿದ್ದಕ್ಕೂ ಉಗ್ರಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಉಗ್ರಪ್ಪ, ಸುದೀಪ್ ಅವರು ಸಮಾಜದ ಪರವಾಗಿ ಹೋರಾಟಕ್ಕೆ ಬರಬೇಕು ಎಂದು ತಾವು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ರಾಜುಗೌಡ ಅವರಿಗೆ ಸುದೀಪ್ ಈಗ ಪರಿಚಯವಾಗಿರಬಹುದು. ಆದರೆ, ತಮಗೆ ಹಲವು ವರ್ಷಗಳಿಂದಲೂ ಸುದೀಪ್ ಅವರ ಪರಿಚಯವಿದೆ ಎಂದು ಹೇಳಿದ್ದಾರೆ. 2003ರಲ್ಲೇ ಸುದೀಪ್ ಅವರ ತಂದೆ ಸಂಜೀವ್ ಅವರನ್ನು ಭೇಟಿ ಮಾಡಿದ್ದೆವು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಹಿಂದೆ ನಟ ಡಾ. ರಾಜ್‌ಕುಮಾರ್ ಅವರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು. ನಟ ಅಂಬರೀಷ್ ಕೂಡ ಕಾವೇರಿ ವಿವಾದದ ಸಂದರ್ಭದಲ್ಲಿ ಹೋರಾಟಕ್ಕೆ ಧುಮುಕಿದ್ದರು ಎಂದು ಉಗ್ರಪ್ಪ ಉದಾಹರಣೆ ನೀಡಿದ್ದಾರೆ. ಕಲಾವಿದರು ಸಮಾಜದ ಹಿತಾಸಕ್ತಿಗಾಗಿ ಹೋರಾಟಕ್ಕೆ ಬರುವುದು ತಪ್ಪಲ್ಲ ಎಂದು ಪ್ರತಿಪಾದಿಸಿರುವ ಅವರು, ಶೇ. 56ರಷ್ಟು ಮೀಸಲಾತಿ ಹಾಗೂ ಸಮುದಾಯದ ಹಕ್ಕುಗಳಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಹೇಳಿದ್ದಾರೆ.

“ಮೈ ಡಿಯರ್ ಬ್ರದರ್, ಮೀಸಲಾತಿ ಮತ್ತು ಹಕ್ಕುಗಳ ಹೋರಾಟಕ್ಕೆ ಬನ್ನಿ ಎನ್ನುವುದರಲ್ಲಿ ತಪ್ಪೇನಿದೆ? ಸಮಾಜ ಉಳಿದರೆ ಮಾತ್ರ ನಾವು ಉಳಿಯುತ್ತೇವೆ. ಹಿಂದುಳಿದ ವರ್ಗಗಳ ಜನರು ಬಲಗೊಂಡರೆ ಮಾತ್ರ ರಾಜಕೀಯಕ್ಕೂ ಅರ್ಥವಿರುತ್ತದೆ” ಎಂದು ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಸುದೀಪ್ ಅವರ ನಾಯಕತ್ವದಲ್ಲಿಯೇ ಹೋರಾಟ ನಡೆಸಲು ಸಿದ್ಧವಿದ್ದೇವೆ. ಸಮುದಾಯದ ಸ್ವಾಮೀಜಿಗಳು ಮುನ್ನಡೆ ವಹಿಸಿದರೂ ಅವರೊಂದಿಗೆ ಕೈಜೋಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ. ಸುದೀಪ್ ಅವರಿಂದ ಸಮಾಜಕ್ಕೆ ಬೆಂಬಲ ಬೇಕಿದೆ. ಅದೇ ರೀತಿ ಸುದೀಪ್ ಅವರಿಗೂ ಸಮಾಜದ ಬೆಂಬಲ ಅಗತ್ಯವಿರಬಹುದು. ಪರಸ್ಪರ ಬೆಂಬಲ ಕೋರುವುದರಲ್ಲಿ ತಪ್ಪೇನಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸುದೀಪ್ ಒಳ್ಳೆಯ ನಟ ಮತ್ತು ಅವರ ಕುಟುಂಬವೂ ಉತ್ತಮ ಹಿನ್ನೆಲೆ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಉಗ್ರಪ್ಪ, ಸಮಾಜದ ಹಿತಾಸಕ್ತಿಗಾಗಿ ನಡೆಯುವ ಹೋರಾಟಕ್ಕೆ ಅವರು ಖಂಡಿತವಾಗಿ ಬರಬೇಕು ಎಂದು ಮತ್ತೊಮ್ಮೆ ಮನವಿ ಮಾಡಿದ್ದಾರೆ. ತಮ್ಮ ಮಾತುಗಳನ್ನು ಅಗೌರವವೆಂದು ಅರ್ಥೈಸಬಾರದು ಎಂದು ಹೇಳಿರುವ ಅವರು, ಎಲ್ಲ ಕ್ಷೇತ್ರಗಳ ಗಣ್ಯರೂ ಸಮಾಜದ ಹಕ್ಕುಗಳಿಗಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button