*400 ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ರಶ್ಮಿಕಾ ಮಂದಣ್ಣ*: *‘ಅನ್ನಪೂರ್ಣ’ ಅಭಿಯಾನ ಘೋಷಣೆ!*

ಪ್ರಗತಿವಾಹಿನಿ ಸುದ್ದಿ: ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸಿರುವ ಈ ಸಿನಿಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ರಶ್ಮಿಕಾ 400 ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ನೆರವು ನೀಡುವ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ‘ಅನ್ನಪೂರ್ಣ’ ಎಂಬ ಹೊಸ ಸಾಮಾಜಿಕ ಅಭಿಯಾನದ ಮೂಲಕ ಕುಟುಂಬಗಳಿಗೆ ಅಗತ್ಯ ದಿನಸಿ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ.
‘ಅನ್ನಪೂರ್ಣ’ ಅಭಿಯಾನದಡಿ ಆಯ್ಕೆ ಮಾಡಿರುವ 400 ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಅಗತ್ಯ ದಿನಸಿ ಸಾಮಗ್ರಿಗಳು ಹಾಗೂ ನಿತ್ಯೋಪಯೋಗಿ ವಸ್ತುಗಳನ್ನು ನೀಡಲಾಗುತ್ತದೆ. ಈ ಸಾಮಾಜಿಕ ಸೇವೆಯನ್ನು ಮುಂದಿನ ಒಂದು ವರ್ಷದವರೆಗೆ ನಿರಂತರವಾಗಿ ಮುಂದುವರಿಸುವ ಉದ್ದೇಶವನ್ನೂ ರಶ್ಮಿಕಾ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಿರ್ಧಾರದ ಕುರಿತು ಹಂಚಿಕೊಂಡಿರುವ ನಟಿ, ಅಭಿಮಾನಿಗಳು ತಮ್ಮ ಮೇಲೆ ತೋರಿಸುತ್ತಿರುವ ಪ್ರೀತಿಗೆ ಪ್ರತಿಯಾಗಿ ಸಮಾಜಕ್ಕೆ ಏನಾದರೂ ಮರಳಿ ನೀಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು ಎಂದು ತಿಳಿಸಿದ್ದಾರೆ. ನಾವು ಮಾಡುವ ಸಣ್ಣ ಸಹಾಯವೂ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಮೂಡಿಸಬಹುದು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ನೆರವಿನಿಂದ ಕುಟುಂಬಗಳು ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಜೊತೆಗೆ, ಭವಿಷ್ಯಕ್ಕಾಗಿ ಸ್ವಲ್ಪ ಹಣ ಉಳಿಸಿಕೊಳ್ಳಲು ಸಾಧ್ಯವಾಗಬಹುದು ಎಂಬ ನಿರೀಕ್ಷೆಯನ್ನೂ ರಶ್ಮಿಕಾ ಹಂಚಿಕೊಂಡಿದ್ದಾರೆ. ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಸೇವೆಯಲ್ಲಿ ರಶ್ಮಿಕಾ ತೊಡಗಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವಿಜಯ್ ದೇವರಕೊಂಡ ಅವರೊಂದಿಗೆ ಸೇರಿ ದೇವರಕೊಂಡ ಫೌಂಡೇಶನ್ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬೆಂಬಲ ನೀಡಿದ್ದರು. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಒದಗಿಸುವ ಕಾರ್ಯದಲ್ಲಿಯೂ ಇಬ್ಬರೂ ಪಾಲ್ಗೊಂಡಿದ್ದರು. ಈ ನೆರವನ್ನು ಪ್ರತಿವರ್ಷ ಮುಂದುವರಿಸುವುದಾಗಿ ಘೋಷಿಸಿದ್ದ ವಿಚಾರವೂ ಗಮನ ಸೆಳೆದಿತ್ತು.
ಇದೀಗ 400 ಕುಟುಂಬಗಳಿಗೆ ದಿನಸಿ ಮತ್ತು ಅಗತ್ಯ ವಸ್ತುಗಳನ್ನು ಒದಗಿಸುವ ‘ಅನ್ನಪೂರ್ಣ’ ಅಭಿಯಾನವನ್ನು ಘೋಷಿಸಿರುವ ರಶ್ಮಿಕಾ, ತಮ್ಮ ಜನಪ್ರಿಯತೆಯನ್ನು ಸಾಮಾಜಿಕ ಒಳಿತಿಗಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ‘ರಣಬಾಲಿ’ ಚಿತ್ರದ ಪ್ರಚಾರದ ನಡುವೆಯೇ ಪ್ರಕಟಿಸಿರುವ ಈ ನಿರ್ಧಾರ ಅಭಿಮಾನಿಗಳ ಗಮನ ಸೆಳೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



