CrimeKannada NewsKarnataka NewsLatest

*ಅಂಜನಾದ್ರಿ ಬೆಟ್ಟದ ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ದೂರು ದಾಖಲು*

ಪ್ರಗತಿವಾಹಿನಿ ಸುದ್ದಿ: ಕೊಪ್ಪಳ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಂಜನಾದ್ರಿ ಬೆಟ್ಟದ ದೇವಸ್ಥಾನದ ಆಡಳಿತ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ದೇವಸ್ಥಾನದ ಅರ್ಚಕ ವಿದ್ಯಾದಾಸ್ ಬಾಬಾ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಸಿಬ್ಬಂದಿಯನ್ನು ಕಚೇರಿಯಿಂದ ಹೊರಹಾಕಿ, ಕೊಠಡಿಗಳಿಗೆ ಬೀಗ ಹಾಕಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿನಾಯಕ ಅವರು ದೂರು ನೀಡಿದ್ದಾರೆ.

ದೂರಿನ ಪ್ರಕಾರ, ಹೈಕೋರ್ಟ್ ಆದೇಶದಂತೆ ವಿದ್ಯಾದಾಸ್ ಬಾಬಾ ಅವರು ಶಾಂತಿಯುತವಾಗಿ ಪೂಜೆ ಸಲ್ಲಿಸಲು ಮತ್ತು ಒಂದು ಕೊಠಡಿಯನ್ನು ಬಳಸಲು ಮಾತ್ರ ಅನುಮತಿ ಪಡೆದಿದ್ದರು. ಈ ಅನುಮತಿಯ ಹೊರತಾಗಿ ಬೇರೆ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂಬ ಷರತ್ತುಗಳಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೂನ್ 13ರಂದು ಸಂಜೆ ಸುಮಾರು 4.30ರ ವೇಳೆಗೆ ಅಂಜನಾದ್ರಿ ಬೆಟ್ಟದ ಸಿಬ್ಬಂದಿ ವೆಂಕಟೇಶ್ ಅವರು ತಹಶೀಲ್ದಾರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ವಿದ್ಯಾದಾಸ್ ಬಾಬಾ ಅವರು ಕಚೇರಿಯಿಂದ ಸಿಬ್ಬಂದಿಯನ್ನು ಹೊರಹಾಕಿ, ಕಚೇರಿ ಸೇರಿದಂತೆ ಇತರ ಕೊಠಡಿಗಳಿಗೆ ಬೀಗ ಹಾಕಿದ್ದಾರೆ. ಸಿಬ್ಬಂದಿಯ ಮಾತನ್ನೂ ಕೇಳುತ್ತಿಲ್ಲ ಎಂದು ತಿಳಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.

ಮಾಹಿತಿ ತಿಳಿದ ತಹಶೀಲ್ದಾರ್ ವಿನಾಯಕ ಅವರು ಸಿಬ್ಬಂದಿಗಳಾದ ರವಿಕುಮಾರ ನಾಯ್ಕವಾಡಿ, ಮಹೇಶ ದಾಲಾಲ್ ಮತ್ತು ಚನ್ನಪ್ಪ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಿಚಾರಣೆ ನಡೆಸಿದಾಗ, ಸಂಜೆ 4.15ರ ಸುಮಾರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯಾದಾಸ್ ಬಾಬಾ ಏಕಾಏಕಿ ಒಳಬಂದು ಕೆಲಸಕ್ಕೆ ಅಡ್ಡಿಪಡಿಸಿ, ತಮ್ಮನ್ನು ಹೊರಗೆ ಕಳುಹಿಸಿ ಬೀಗ ಹಾಕಿದ್ದಾರೆ ಎಂದು ಸಿಬ್ಬಂದಿ ತಿಳಿಸಿರುವುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಕಚೇರಿಯ ಬೀಗ ತೆರೆಯುವಂತೆ ತಹಶೀಲ್ದಾರ್ ಮತ್ತು ಸಿಬ್ಬಂದಿ ಕೇಳಿದಾಗ, ನ್ಯಾಯಾಲಯದ ಆದೇಶ ತಮ್ಮ ಪರವಾಗಿದ್ದು, ತಾನೇ ಅಂಜನಾದ್ರಿ ಬೆಟ್ಟದ ವಾರಸುದಾರ ಎಂದು ವಿದ್ಯಾದಾಸ್ ಬಾಬಾ ಹೇಳಿದ್ದಾರೆ ಎಂಬ ಆರೋಪವೂ ಇದೆ. ಅಲ್ಲದೆ, ಅಧಿಕಾರಿಗಳಿಗೆ ಈ ಸ್ಥಳದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ಅಲ್ಲಿಂದ ತೆರಳುವಂತೆ ಸೂಚಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವರ್ತನೆಯಿಂದ ಸರ್ಕಾರಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಯಾಗಿದೆ ಎಂದು ಆರೋಪಿಸಿರುವ ತಹಶೀಲ್ದಾರ್, ವಿದ್ಯಾದಾಸ್ ಬಾಬಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಗಂಗಾವತಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button