*ನವರಾತ್ರಿ ಸಂಭ್ರಮದ ನಡುವೆ ಅವಘಡ*: *ಭಕ್ತರ ಮೇಲೆ ಬಿದ್ದ ಬೃಹತ್ ಲೈಟ್ ಸೆಟ್, ವೃದ್ಧನಿಗೆ ಗಂಭೀರ ಗಾಯ!*

ಪ್ರಗತಿವಾಹಿನಿ ಸುದ್ದಿ: ನವರಾತ್ರಿ ಸಂಭ್ರಮದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ದುರಂತವೊಂದು ಸಂಭವಿಸಿದೆ. ಬಲವಾದ ಗಾಳಿಗೆ ಬೃಹತ್ ಗಾತ್ರದ ಲೈಟ್ ಸೆಟ್ ಉರುಳಿ ಭಕ್ತರ ಮೇಲೆ ಬಿದ್ದಿದ್ದು, ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಒಟ್ಟು ಮೂವರು ಭಕ್ತರಿಗೆ ಲೈಟ್ ತಗುಲಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದ ಮೇಲ್ಭಾಗದಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಬೃಹತ್ ಲೈಟ್ ಸೆಟ್ ಅಳವಡಿಸಲಾಗಿತ್ತು. ಇಂದು ಏಕಾಏಕಿ ಬಲವಾದ ಗಾಳಿ ಬೀಸಿದ ಪರಿಣಾಮ ಲೈಟ್ ಸೆಟ್ ಕಟ್ಟಡದ ಮೇಲಿನಿಂದ ಕೆಳಕ್ಕೆ ಉರುಳಿ ಬಿದ್ದಿದೆ.
ಬಿಸಿಲಿನ ಕಾರಣಕ್ಕೆ ಕಟ್ಟಡದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ಲೈಟ್ ಸೆಟ್ ಬಿದ್ದಿದೆ. ಈ ವೇಳೆ ಮೂವರು ಭಕ್ತರಿಗೆ ಲೈಟ್ ತಗುಲಿದ್ದು, ದಿಢೀರ್ ಘಟನೆ ಸಂಭವಿಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಲೈಟ್ ಕೆಳಗೆ ಬಿದ್ದ ತಕ್ಷಣ ಭಕ್ತರು ಅಲ್ಲಿಂದ ಹೊರಬರಲು ಪ್ರಯತ್ನಿಸಿದ್ದಾರೆ.
ಈ ವೇಳೆ ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆ ಲೈಟ್ ಬಿದ್ದಿದ್ದು, ಅವರು ಮೇಲೇಳಲಾಗದೆ ಒದ್ದಾಡಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಲೈಟ್ ಸೆಟ್ ತೆರವುಗೊಳಿಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ವಯೋವೃದ್ಧರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.
ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವುದರಿಂದ ಈ ಘಟನೆ ಆತಂಕ ಮೂಡಿಸಿದೆ. ಸಾರ್ವಜನಿಕರು ನಿಲ್ಲುವ ಸ್ಥಳಗಳಲ್ಲಿ ಅಳವಡಿಸಿರುವ ಅಲಂಕಾರಿಕ ಲೈಟ್ಗಳು ಮತ್ತು ಇತರ ವ್ಯವಸ್ಥೆಗಳ ಸುರಕ್ಷತೆಯನ್ನು ಪರಿಶೀಲಿಸುವ ಅಗತ್ಯವನ್ನು ಈ ಅವಘಡ ಎತ್ತಿತೋರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


