*ಆಸ್ಪತ್ರೆಗೆ ತಲುಪಲು ಒಂದು ನಿಮಿಷವಿತ್ತು, ಅಷ್ಟರಲ್ಲೇ ಅಪ್ಪು ಹೃದಯ ಬಡಿತ ನಿಂತಿತ್ತು*: *ವೈದ್ಯರ ಭಾವುಕ ನೆನಪು!*

ಪ್ರಗತಿವಾಹಿನಿ ಸುದ್ದಿ: ಕನ್ನಡಿಗರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೆನಪು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಹಸಿರಾಗಿದೆ. ಅಪ್ಪು ಅವರ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬುದನ್ನು ಚಿಕಿತ್ಸೆ ನೀಡಿದ್ದ ವೈದ್ಯ ಡಾ. ರಮಣ ರಾವ್ ನೆನಪಿಸಿಕೊಂಡಿದ್ದಾರೆ. ಜಿಮ್ನಲ್ಲಿ ಕಿಕ್ ಬಾಕ್ಸಿಂಗ್ ಮಾಡಿದ ಬಳಿಕ ಆಯಾಸಗೊಂಡಿದ್ದ ಪುನೀತ್ ಕ್ಲಿನಿಕ್ಗೆ ಬಂದಿದ್ದರು. ಆದರೆ, ಆಸ್ಪತ್ರೆಗೆ ತಲುಪಲು ಕೇವಲ ಒಂದು ನಿಮಿಷ ಇರುವಾಗ ಅವರ ಹೃದಯ ಬಡಿತ ನಿಂತಿತ್ತು ಎಂಬ ಕಹಿ ಸಂಗತಿಯನ್ನು ವೈದ್ಯರು ಹಂಚಿಕೊಂಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಡಾ. ರಮಣ ರಾವ್, ಪುನೀತ್ ತಮ್ಮ ಪಾಲಿಗೆ ಮಗನ ಸಮಾನವಾಗಿದ್ದರು ಎಂದು ಭಾವುಕರಾಗಿ ಹೇಳಿದ್ದಾರೆ. ಅಂದು ಜಿಮ್ನಲ್ಲಿ ಪುನೀತ್ ಎಂದಿಗಿಂತ ಭಿನ್ನವಾಗಿ ಕಿಕ್ ಬಾಕ್ಸಿಂಗ್ ಅಭ್ಯಾಸ ಮಾಡಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ಕಸರತ್ತು ನಡೆಸಿದ ಬಳಿಕ ತೀವ್ರ ಆಯಾಸದಿಂದ ಕ್ಲಿನಿಕ್ಗೆ ಬಂದಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಕ್ಲಿನಿಕ್ಗೆ ಬಂದಾಗ ಪುನೀತ್ ಮೈಯೆಲ್ಲ ಬೆವರಿನಿಂದ ಒದ್ದೆಯಾಗಿತ್ತು. ಅವರ ಸ್ಥಿತಿಯನ್ನು ಗಮನಿಸಿದ ವೈದ್ಯರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಇಸಿಜಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಹೃದಯದ ಮೇಲೆ ತೀವ್ರ ಒತ್ತಡ ಉಂಟಾಗಿರುವ ಲಕ್ಷಣಗಳು ಕಂಡುಬಂದಿದ್ದವು ಎಂದು ರಮಣ ರಾವ್ ತಿಳಿಸಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ವೈದ್ಯರು ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರು. ಪುನೀತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು. ಅಪ್ಪು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ತೆರಳಿದ್ದರು. ದಾರಿಯಲ್ಲಿ ಪತ್ನಿ ಅಶ್ವಿನಿ ಅವರ ತೊಡೆಯ ಮೇಲೆ ತಲೆ ಇಟ್ಟು ವಿಶ್ರಾಂತಿ ಪಡೆಯುತ್ತಾ ಮಾತನಾಡುತ್ತಿದ್ದರು ಎಂದು ವೈದ್ಯರು ವಿವರಿಸಿದ್ದಾರೆ.
ಆದರೆ, ಆಸ್ಪತ್ರೆ ತಲುಪಲು ಕೇವಲ ಒಂದು ನಿಮಿಷ ಇರುವಾಗ ಪುನೀತ್ ಅವರ ಹೃದಯ ಬಡಿತ ನಿಂತಿತ್ತು. ಆಸ್ಪತ್ರೆಗೆ ತಲುಪಿದಾಗ ಯಾವುದೇ ಸ್ಪಂದನೆ ಇರಲಿಲ್ಲ. ವೈದ್ಯಕೀಯ ಸಿಬ್ಬಂದಿ ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ರಮಣ ರಾವ್ ದುಃಖದಿಂದ ನೆನಪಿಸಿಕೊಂಡಿದ್ದಾರೆ.
ಅಪ್ಪು ಅವರಂತಹ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಂಡ ನೋವು ಇಂದಿಗೂ ತಮ್ಮ ಮನಸ್ಸಿನಲ್ಲಿ ಉಳಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ಅಗಲಿಕೆ ಕುಟುಂಬದವರಷ್ಟೇ ಅಲ್ಲದೆ ಕೋಟ್ಯಂತರ ಅಭಿಮಾನಿಗಳಿಗೂ ತುಂಬಲಾರದ ನಷ್ಟವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




